Site icon Vistara News

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್‌ ಆತಿಥ್ಯಕ್ಕೆ ಮುಂದಾದ ಜಿಂಬಾಬ್ವೆ

ICC Women's T20 World Cup

ICC Women's T20 World Cup: Zimbabwe express interest in hosting Women's T20 World Cup 2024

ಮುಂಬಯಿ: ಬಾಂಗ್ಲಾದೇಶದಲ್ಲಿ(bangladesh violence)  ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಅಲ್ಲಿನ ನಾಗರೀಕರು ನಡೆಸುತ್ತಿರುವ ಪ್ರತಿಭಟನೆ, ಗಲಭೆಗಳಿಂದ ಸಂಭವಿಸಿರುವ ಬಿಕ್ಕಟ್ಟಿನಿಂದಾಗಿ ಮುಂಬರುವ ಮಹಿಳಾ ಟಿ20 ವಿಶ್ವಕಪ್‌(ICC Women’s T20 World Cup) ಪಂದ್ಯಾವಳಿಯನ್ನು ಆಯೋಜಿಸಲು ಐಸಿಸಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದ್ದ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಈ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸುವುದಿಲ್ಲ ಎಂದು ಹೇಳಿದ್ದರು. ಇದೀಗ ಜಿಂಬಾಬ್ವೆ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಕ್ರಿಕ್ ​ಇನ್ಫೋ ವರದಿಯ ಪ್ರಕಾರ ಜಿಂಬಾಬ್ವೆ ಟೂರ್ನಿಯ ಆತಿಥ್ಯವಹಿಸಿಕೊಳ್ಳಲು ತಮ್ಮ ಆಸಕ್ತಿಯನ್ನು ಐಸಿಸಿಗೆ ವ್ಯಕ್ತಪಡಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಗುರುವಾರವಷ್ಟೇ ಮಾಧ್ಯಮವೊಂದರ ಜತೆ ಮಾತನಾಡಿದ್ದ ಜಯ್‌ ಶಾ, “ಮಹಿಳಾ ಟಿ20 ವಿಶ್ವಕಪ್‌ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ನಾನು ಇದನ್ನು ನಿರಾಕರಿಸುತ್ತೇನೆ ಎಂದಿದ್ದರು. 

ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಸೇನಾ ಮುಖ್ಯಸ್ಥ ಜನರಲ್‌ ವಕಾರ್‌ ಜಮಾನ್‌ ಅವರಿಗೆ ಪತ್ರ ಬರೆದು, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ನಡೆಸಿಕೊಡಲು ಸಹಾಯ ಮಾಡಬೇಕು ಎಂದು ಕೋರಿತ್ತು. ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸುವಂತೆ ಕಾಣುತ್ತಿಲ್ಲ ಹೀಗಾಗಿ ಐಸಿಸಿ ಪರ್ಯಾಯ ಸ್ಥಳದ ಹುಡುಕಾಟ ನಡೆಸುತ್ತಿದೆ. ಮೂಲ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಬೇಕು.

ಶೇಕ್‌ ಹಸೀನಾ ಅವರು ರಾಜೀನಾಮೆ ನೀಡಿ ಪಲಾಯನ ಮಾಡಿದ ಬಳಿಕ ನಡೆದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮನೆಗಳು, ವ್ಯವಹಾರಗಳು ಮತ್ತು ದೇವಾಲಯಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರದಲ್ಲಿ ಶಾಲಾ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕನಿಷ್ಠ 45 ಜನರು ಗಾಯಗೊಂಡಿದ್ದಾರೆ. ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಹೀಗಾಗಿ ಇವರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತದೆ ಎನ್ನಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥ ಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

Exit mobile version