Site icon Vistara News

ICC Wones U19 T20 World Cup: ವನಿತೆಯರ ಟಿ20 ವಿಶ್ವ ಕಪ್​; ಸೆಮಿಫೈನಲ್​ ಪ್ರವೇಶಿಸಿದ ಭಾರತ

icc u19 women's world cup india

ಪೊಚೆಫ್ ಸ್ಟ್ರೂಮ್‌: ಐಸಿಸಿ ಅಂಡರ್ 19 ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ(ICC Wones U19 T20 World Cup) ಭಾರತದ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಜನವರಿ 27 ರಂದು ನಡೆಯುವ ಈ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್​ ಸವಾಲು ಎದುರಿಸಲಿದೆ.

ಸೂಪರ್ ಸಿಕ್ಸ್ ಹಂತದ 1ನೇ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಭಾರತದ ವನಿತೆಯರು ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂಪರ್ 6 ಹಂತದಲ್ಲಿ ಶಫಾಲಿ ವರ್ಮ ಪಡೆ ಆಡಿದ 4 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತ್ತು. ಆಸ್ಟ್ರೇಲಿಯಾ ಕೂಡ 4 ಪಂದ್ಯಗಳಲ್ಲಿ 3 ಜಯ ಸಾಧಿಸಿ 6 ಅಂಕ ಹೊಂದಿದೆ. ಆದರೆ ರನ್‌ರೇಟ್ ಆಧಾರದಲ್ಲಿ ಭಾರತ ಅಗ್ರಸ್ಥಾನ ಪಡೆಯಿತು.

ಸೂಪರ್ ಸಿಕ್ಸ್ 2ನೇ ಗುಂಪಿನಿಂದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ಕಿವೀಸ್​ ವಿರುದ್ಧ ಸೆಣಸಿದರೆ, ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಸವಾಲು ಎದುರಿಸಲಿದೆ.

ಕಿವೀಸ್​-ಇಂಗ್ಲೆಂಡ್​ ಬಲಿಷ್ಠ

ಸೂಪರ್ ಸಿಕ್ಸ್ ಹಂತದಲ್ಲಿ ಕಿವೀಸ್​ ಮತ್ತು ಇಂಗ್ಲೆಂಡ್ ಅಜೇಯವಾಗಿ ಉಳಿದಿವೆ. ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಕೂಟದ ಬಲಿಷ್ಠವಾಗಿ ಗೋಚರಿಸಿದೆ. ಆದ್ದರಿಂದ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಎದುರಾಳಿಗಳಿಗೆ ಕಠಿಣ ಪೈಪೋಟಿ ನೀಡುವ ಸಾಧ್ಯತೆ ಇದೆ.

ಸೆಮಿಯಲ್ಲಿ ಕಿವೀಸ್​ ಕಂಟಕ

ಭಾರತಕ್ಕೆ ವಿವಿಧ ಟೂರ್ನಿಗಳಲ್ಲಿ ಕಿವೀಸ್​ ಕಂಟಕವಾಗಿದೆ. 2021 ರ ಟಿ20 ವಿಶ್ವ ಕಪ್‌ನಲ್ಲಿ ಭಾರತ ಪುರುಷರ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಸೆಮಿ ಫೈನಲ್‌ನಲ್ಲಿ ಸೋಲನುಭವಿಸಿತ್ತು. ಕಳೆದ ಬಾರಿಯ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ಕೂಡ ನ್ಯೂಜಿಲ್ಯಾಂಡ್​ ತಂಡ ಭಾರತವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಹಾಕಿ ವಿಶ್ವ ಕಪ್‌ನಲ್ಲಿ ಕೂಡ ಕಿವೀಸ್​ ಭಾರತಕ್ಕೆ ಆಘಾತ ನೀಡಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯದಲ್ಲಿ ಅದೃಷ್ಟವೂ ಕೈಬಿಡಬೇಕಿದೆ.

ಶಫಾಲಿ-ಸೆಹ್ರಾವತ್ ಮೇಲೆ ನಿರೀಕ್ಷೆ

“ಲೇಡಿ ಸೆಹವಾಗ್‌’ ಖ್ಯಾತಿಯ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಮತ್ತು ಉಪನಾಯಕಿ ಶ್ವೇತಾ ಸೆಹ್ರಾವತ್ ಮೇಲೆ ಈ ಪಂದ್ಯದಲ್ಲಿ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಉಭಯ ಆಟಗಾರ್ತಿಯರು ಈಗಾಗಲೇ ಆಡಿದ ಲೀಗ್​ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ. ಇದೇ ಪ್ರದರ್ಶನ ಕಿವೀಸ್​​ ವಿರುದ್ಧವೂ ಕಂಡುಬಂದರೆ ಭಾರತಕ್ಕೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ​ಉಳಿದಂತೆ ಬೌಲಿಂಗ್‌ನಲ್ಲಿ ಮನ್ನತ್ ಕಶ್ಯಪ್‌, ಅರ್ಚನಾ ದೇವಿ ಉತ್ತಮ ಲಯದಲ್ಲಿರುವುದು ಕೂಡ ತಂಡಕ್ಕೆ ಪ್ಲಸ್​ ಪಾಯಿಂಟ್​. ಆದರೂ ಕಿವೀಸ್​ ಸವಾಲನ್ನು ಕಡೆಗಣಿಸಬಾರದು.

ಇದನ್ನೂ ಓದಿ | ICC Women’s ODI Team of the Year: ಐಸಿಸಿ ವರ್ಷದ ಮಹಿಳಾ ಏಕದಿನ ತಂಡಕ್ಕೆ ಟೀಮ್​ ಇಂಡಿಯಾದ ಹರ್ಮನ್​ಪ್ರೀತ್​ ಕೌರ್​ ನಾಯಕಿ

Exit mobile version