ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ವೇಳಾಪಟ್ಟಿ ಪ್ರಕಟಗೊಂಡಿದೆ. ಟೂರ್ನಿ ಆರಂಭಕ್ಕೆ ಇನ್ನು ಮೂರು ತಿಂಗಳು ಮಾತ್ರ ಉಳಿದಿವೆ. ಎಲ್ಲ ತಂಡಗಳು ಈ ಮಹತ್ವದ ಟೂರ್ನಿಗೆ ಈಗಾಗಲೇ ತಂಡವನ್ನು ಸಿದ್ಧಪಡಿಸುವತ್ತ ಗಮನ ಹರಿಸಿದೆ. ಆದರೆ ಆತಿಥೇಯ ದೇಶ ಭಾರತಕ್ಕೆ ಆಘಾತವೊಂದು ಎದುರಾಗಿದೆ. ಸ್ಟಾರ್ ಆಟಗಾರನ ಸೇವೆ ಕಳೆದುಕೊಳ್ಳುವ ಭೀತಿಯಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ತವರಿನ ಟೆಸ್ಟ್ ಪಂದ್ಯದ ವೇಳೆ ಬೆನ್ನ ನೋವಿನ ಸಮಸ್ಯೆಗೆ ಸಿಲುಕಿ ತಂಡದಿಂದ ಹೊರಗುಳಿದಿರುವ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್(shreyas iyer) ಅವರಿಗೆ ಮತ್ತೆ ನೋವು ಕಾಣಿಸಿಕೊಂಡಿದ್ದು ಅವರು ವಿಶ್ವಕಪ್ ವೇಳೆ ಫಿಟ್ ಆಗುವುದು ಅನುಮಾನ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಅಯ್ಯರ್ ಅವರು ಬೆಂಗಳೂರಿನ ಎನ್ಸಿಎಯಲ್ಲಿ ಪುಶ್ಚೇತನ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದು ಅವರು ಗಾಯದಿಂದ ಚೇತರಿಕೆ ಕಾಣುವ ಲಕ್ಷಣ ತೋರುತಿಲ್ಲ. ಪದೇಪದೆ ಅವರಿಗೆ ನೋವು ಕಾಣಿಸುತ್ತಿದೆ ಎಂದಿದ್ದಾರೆ.
ಒಂದೊಮ್ಮೆ ಅಯ್ಯರ್ ಅವರ ಸೇವೆ ಭಾರತಕ್ಕೆ ಸಿಗದಿದ್ದರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೊಡೆತ ಬೀಳಲಿದೆ. 2019ರ ವಿಶ್ವ ಕಪ್ ವೇಳೆಯೂ ಭಾರತಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರನಿಲ್ಲದೆ ಹಿನ್ನಡೆಯಾಗಿತ್ತು. ಆದರೆ ಬಳಿಕ ಈ ಸ್ಥಾನವನ್ನು ತುಂಬಲ್ಲ ಆಟಗಾರನಾಗಿ ಅಯ್ಯರ್ ಕಾಣಿಸಿಕೊಂಡಿದ್ದರು. ಇದೀಗ ಅವರು ವಿಶ್ವ ಕಪ್ ಆಡುವುದು ಅನುಮಾನ ಎನ್ನಲಾಗಿದ್ದು ಮತ್ತೆ ಭಾರತ ತಂಡ ಈ ಸ್ಥಾನಕ್ಕೆ ಸೂಕ್ತ ಆಟಗಾರ ಹುಡುಕಾಟ ನಡೆಸಬೇಕಿದೆ.
ಇದನ್ನೂ ಓದಿ Asia Cup | ಏಷ್ಯಾಕಪ್; ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ!
ಜಸ್ಪ್ರೀತ್ ಬುಮ್ರಾ ಅವರಿಗೂ ಪದೇಪದೆ ಬೆನ್ನು ಕಾಡಿದ ಕಾರಣ ಅವರಿಗೆ ನ್ಯೂಜಿಲ್ಯಾಂಡ್ನಲ್ಲಿ ಉನ್ನತ ಮಟ್ಟದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ಚೇತರಿಸಿಕೊಂಡಿದ್ದು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಅವರು ಕೂಡ ಗಾಯಗೊಂಡಿದ್ದು ಚೇತರಿಕೆ ಕಾಣುತ್ತಿದ್ದಾರೆ. ಪಂತ್ ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ಗೆ ಯಾವಾಗ ಮರಳುತ್ತಾರೆ ಎನ್ನುವುದು ಖಚಿತತೆ ಇಲ್ಲ. ಒಟ್ಟಾರೆ ಭಾರತಕ್ಕೆ ಗಾಯದ್ದೇ ಚಿಂತೆಯಾಗಿದೆ.
ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು