Site icon Vistara News

ಆಫ್ಘನ್​ ತಂಡಕ್ಕೂ ಇದೆ ಸೆಮಿಫೈನಲ್​ ಅವಕಾಶ; ಪಾಕ್​ ತಂಡದ ಸ್ಥಿತಿಯೇನು?

Afghanistan registered their first ODI win against Pakistan in Chennai

ಚೆನ್ನೈ: ಪಾಕಿಸ್ತಾನ ವಿರುದ್ಧ ಅಮೋಘ 8 ವಿಕೆಟ್​ಗಳ ಗೆಲುವು ಸಾಧಿಸಿದ ಅಫಘಾನಿಸ್ತಾನ ತಂಡಕ್ಕೂ ವಿಶ್ವಕಪ್​(ICC World Cup 2023) ಸೆಮಿಫೈನಲ್​ಗೇರುವ ಅವಕಾಶವಿದೆ. ಸದ್ಯ ಅಫ್ಘಾನಿಸ್ತಾನ ಐದು ಪಂದ್ಯಗಳನ್ನು ಆಡಿ 2ರಲ್ಲಿ ಗೆಲುವು 3ರಲ್ಲಿ ಸೋಲು ಕಂಡಿದೆ. ಒಟ್ಟು 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಸೋಲು ಕಂಡ ಪಾಕ್​ ಕೂಡ 4 ಅಂಕ ಪಡೆದಿದೆ. ಆದರೆ ರನ್​ ರೇಟ್​ ಆಧಾರದಲ್ಲಿ ಆಫ್ಘನ್​ಗಿಂತ ಒಂದು ಸ್ಥಾನ ಮೇಲಿದೆ. ಅಫಘಾನಿಸ್ತಾ ತಂಡ ಸೆಮಿಫೈನಲ್​ ಪ್ರವೇಶ ಪಡೆಯಬೇಕಾದರೆ ಇರುವ ಲೆಕ್ಕಾಚಾರದ ಮಾಹಿತಿ ಇಂತಿದೆ.

4 ಗೆಲುವು ಅಗತ್ಯ

ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್​ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದೆ. ಈ ತಂಡಗಳು ಬಹುತೇಖ ಸೆಮಿಫೈನಲ್​ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವು ಇಲ್ಲ. ಮೂರನೇ ಸ್ಥಾನಿಯಾಗಿ ದಕ್ಷಿಣ ಆಫ್ರಿಕಾ ತಂಡ ಸೆಮಿ ಪ್ರವೇಸಿಸಬಹುದು. ಆದರೆ ನಾಲ್ಕನೇ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಇಲ್ಲಿ ತಲಾ 4 ಅಂಕ ಪಡೆದಿರುವ ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಅಫಘಾನಿಸ್ತಾನ ತಂಡದ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಅಫ್ಘಾನಿಸ್ತಾನ ಉಳಿದಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದರೆ 12 ಅಂಕಗಳನ್ನು ಸಂಪಾದಿ ಸೆಮಿಫೈನಲ್​ ಪ್ರವೇಶಿಸುವ ಅಕಾಶವಿದೆ.

ಅಫ್ಘಾನಿಸ್ತಾನ ತಂಡವು ಮುಂದಿನ ನಾಲ್ಕು ಪಂದ್ಯಗಳನ್ನು ಕ್ರಮವಾಗಿ ಶ್ರೀಲಂಕಾ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾಗಿದೆ. ಈ ಎಲ್ಲ ಪಂದ್ಯ ಗೆದ್ದರೆ ಆಫ್ಘನ್ ಸೆಮಿ ಪ್ರವೇಶ ಪಡೆಯಲಿದೆ. ಬಲಿಷ್ಠ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದ ಆಫ್ಘನ್​ಗೆ ಈ ಸವಾಲು ಕಷ್ಟಕರವಾಗದು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ನಿರೀಕ್ಷೆ. ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಸೋತರೂ ಸೆಮಿ ರೇಸ್​ನಿಂದ ಹೊರಬೀಳಲಿದೆ.

ಆಸ್ಟ್ರೇಲಿಯಾ ತಂಡವೂ ಉಳಿದಿರುವ 5 ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿ ಟಿಕೆಟ್​ ದೊರೆಯಲಿದೆ. ಒಂದೊಮ್ಮೆ ಕಮ್ಮಿನ್ಸ್ ಪಡೆ 4 ಪಂದ್ಯ ಗೆದ್ದು ಅಫ್ಘಾನಿಸ್ತಾನ ವಿರುದ್ಧ ಸೋತರೆ, ಆಘನ್ ಕೂಡ ಒಂದು ಪಂದ್ಯ ಸೋತು ಉಳಿದ ನಾಲ್ಕು ಪಂದ್ಯ ಗೆದ್ದರೆ ಇತ್ತಂಡಗಳಿಗೂ ಸಮಾನ 12 ಅಂಕ ಲಭಿಸಲಿದೆ. ಆಗ ರನ್​ ರೇಟ್​ನಲ್ಲಿ ಮುಂದಿರುವ ತಂಡಕ್ಕೆ ಅದೃಷ್ಟ ಕುಲಾಯಿಸಲಿದೆ. ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಸತತ ಸೋಲು ಕಂಡರೆ ಆಸೀಸ್​ ಮತ್ತು ಆಫ್ಘನ್​ಗೆ ಹೆಚ್ಚಿನ ಅವಕಾಶ ಸಿಗಲಿದೆ. ಆಗ ಎರಡು ಪಂದ್ಯ ಸೋತರೂ ಯಾವುದೇ ಸಮಸ್ಯೆಯಾಗದು. ಹೀಗೆ ಹಲವು ಲೆಕ್ಕಾಚಾರದಲ್ಲಿ ಮುಂದಿನ ಪಂದ್ಯಗಳು ಸಾಗಲಿದೆ.

ಇದನ್ನೂ ಓದಿ ಆಫ್ಘನ್​-ಪಾಕ್​ ಪಂದ್ಯದ ವೇಳೆ ತಿರಂಗಾವನ್ನು ಕಸದ ಬುಟ್ಟಿಗೆ ಎಸೆದ ಚೆನ್ನೈ ಪೊಲೀಸರು

ಒಂದು ಗೆಲುವು ಅಗತ್ಯ

ಸೆಮಿಫೈನಲ್​ ಪ್ರವೇಶ ಪಡೆಯಬೇಕಾದರೆ ಕನಿಷ್ಠ 6 ಗೆಲುವು ಅಗತ್ಯ. ಈ ಲೆಕ್ಕಾಚಾರದಲ್ಲಿ ಭಾರತ ಇನ್ನೊಂದು ಪಂದ್ಯ ಗೆಲ್ಲಬೇಕು. 2 ಪಂದ್ಯ ಗೆದ್ದರೆ ಭಾರತಕ್ಕೆ ಯಾವುದೇ ಚಿಂತೆ ಇರುವುದಿಲ್ಲ. ನ್ಯೂಜಿಲ್ಯಾಂಡ್​ 2 ಪಂದ್ಯ ಗೆದ್ದರೆ ಅದು ಕೂಡ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. 

ಮಳೆ ಬಂದರೆ ಎಲ್ಲ ಲೆಕ್ಕಾಚಾರ ಉಲ್ಟಾ

ಸೆಮಿಫೈನಲ್ ಬಾಗಿಲಿಗೆ ಬಂದು ನಿಂತಿರುವ ತಂಡಗಳಿಗೆ ತಮ್ಮ ಮುಂದಿನ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಆಗ ಎಲ್ಲ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಏಕೆಂದರೆ ಒಂದೊಂದು ಅಂಕ ಸಿಕ್ಕಿ ಅಂತಿಮವಾಗಿ ರನ್​ ರೇಟ್​ ಆಧಾರದಲ್ಲಿ ಕೆಲ ತಂಡ ಇದರ ಲಾಭವೆತ್ತಿ ಸೆಮಿಫೈನಲ್​ ಪ್ರವೇಶ ಪಡೆಯಲೂಬಹುದು. 2019ರ ವಿಶ್ವಕಪ್​ನಲ್ಲಿ ಕಿವೀಸ್​ ಮತ್ತು ಪಾಕಿಸ್ತಾನ ತಲಾ ಐದು ಗೆಲುವು ಸಾಧಿಸಿ 11 ಅಂಕ ಪಡೆದಿತ್ತು. ಇತ್ತಂಡಗಳ ಒಂದು ಪಂದ್ಯ ಮಳೆಯಿಂದ ರದ್ದುಗೊಂಡು ತಲಾ ಒಂದು ಅಂಕ ಸಿಕ್ಕ ಕಾರಣ 11 ಅಂಕ ಗಳಿಸಿತ್ತು. ಆದರೆ ನಿವ್ವಳ ರನ್ ರೇಟ್ (NRR) ಆಧಾರದಲ್ಲಿ ಹಿಂದಿದ್ದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿತು. ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್ ತಂಡ ಭಾರತವನ್ನು ಮಣಿಸಿ ಫೈನಲ್​ ಪ್ರವೇಶ ಪಡೆಯಿತು. ಹೀಗಾಗಿ ಮಳೆಯು ಕೂಡ ಪ್ರಮುಖ ಪಾತ್ರವಹಿಸುತ್ತದೆ.​

Exit mobile version