Site icon Vistara News

ICC World Cup 2023: ವಿಶ್ವಕಪ್‌ಗಾಗಿ ನವೀಕರಣಗೊಳ್ಳುತ್ತಿದೆ ಅರುಣ್ ಜೇಟ್ಲಿ ಸ್ಟೇಡಿಯಂ

Arun Jaitley Stadium is being renovated

ನವದೆಹಲಿ: ಪ್ರತಿಷ್ಠಿತ ಪುರುಷರ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ(ICC World Cup 2023) ಭಾರತದ ಪ್ರಮುಖ 9 ನಗರಗಳ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ(arun jaitley stadium) ಕೂಡ ಸೇರಿದೆ. ಇದೀಗ ಈ ಮೈದಾನದ ನವೀಕರಣ ಆರಂಭವಾಗಿದೆ.​ ಈ ಬಗ್ಗೆ ಡಿಡಿಸಿಎ ಕಾರ್ಯದರ್ಶಿ ರಾಜನ್ ಮಂಚಂಡ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸೆಪ್ಟೆಂಬರ್ 15ರ ವೇಳೆಗೆ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲಿವೆ ಎಂದು ಬರವಸೆ ನೀಡಿದ್ದಾರೆ.

ವಿಶ್ವ ಕಪ್​ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್‌ 19ರವರೆಗೆ ನಡೆಯಲಿದೆ. ಒಟ್ಟು 10 ತಂಡಗಳು ರೌಂಡ್​ ರಾಬಿನ್​ ಮಾದರಿಯಲ್ಲಿ ಸೆಣಸಾಟ ನಡೆಸಲಿವೆ. ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ಈಗಾಗಲೇ ಈ ವಿಶ್ವ ಕ್ರಿಕೆಟ್​ ಸಮರಕ್ಕೆ ಆತಿಥ್ಯ ವಹಿಸಿಕೊಂಡಿರುವ ಸ್ಟೇಡಿಯಂಗಳು ಇಲ್ಲಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಸರಿಪಡಿಸುತ್ತಿವೆ, ಜತೆಗೆ ಉತ್ತಮ ಪಿಚ್​ ನಿರ್ಮಾಣ ಕಾರ್ಯವೂ ಆರಂಭಗೊಂಡಿದೆ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಒಟ್ಟು 5 ಏಕದಿನ ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸಲಿದೆ. ಈ ವರ್ಷದ ಆರಂಭದಲ್ಲಿ ಸ್ಟೇಡಿಯಂನ ಮೂಲಭೂತ ನೈರ್ಮಲ್ಯದ ಕೊರತೆಯಿಂದಾಗಿ ಮತ್ತು ಸರಿಯಾದ ವಾಶ್‌ರೂಮ್‌ಗಳಿಲ್ಲದೆ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ವಿಶ್ವ ಮಟ್ಟದ ಪಂದ್ಯಕ್ಕೂ ಮುನ್ನ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನವೀಕರಣ ಕಾರ್ಯ ಕೈಗೆತ್ತಿಕೊಂಡಿದೆ.

ನವೀಕರಣದ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುವ ರಾಜನ್ ಮಂಚಂಡ, “ನಾವು ಮೂಲಭೂತ ಸೌಲಭ್ಯಗಳಲ್ಲಿ ಗಮನಾರ್ಹ ನವೀಕರಣ ಮಾಡಲಿದ್ದೇವೆ. ಇದು ಪ್ರೇಕ್ಷಕರ ಆಸನಗಳನ್ನು ಬದಲಾಯಿಸುವುದರಿಂದ ಹಿಡಿದು ವಾಶ್‌ರೂಮ್‌ಗಳ ನವೀಕರಣ, ಗೋಡೆಗಳಿಗೆ ಬಣ್ಣ ಬಳಿಯುವುದು ಮತ್ತು ಟಿಕೆಟಿಂಗ್ ಸಾಫ್ಟ್‌ವೇರ್ ಕೂಡ ಬದಲಾಯಿಸಲಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!

ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಗೌರವ ಪೂರ್ವಕವಾಗಿ ಅವರ ಹೆಸರನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಡಲಾಗಿತ್ತು. ಈ ಕ್ರೀಡಾಂಗಣದಲ್ಲಿ 35,000 ಜನರಿಗೆ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. 1999ರಿಂದ 2003ರವರೆಗೆ ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದರು. ಇದೇ ವೇಳೆಯಲ್ಲಿ ಈ ಕ್ರೀಡಾಂಗಣದ ನವೀಕರಣ ಕೆಲಸ ನಡೆದಿತ್ತು. ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್ ಅನ್ನು ವಿಶ್ವದರ್ಜೆಗೆ ಏರಿಸಿದ್ದರು. ಇದಾದ ಬಳಿಕ ಇಲ್ಲಿ ಯಾವುದೇ ದೊಡ್ಡ ಮಟ್ಟದ ನವೀಕರಣ ನಡೆದಿರಲಿಲ್ಲ.

ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version