ಗುವಾಹಟಿ: ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯನ್ನು ಗೆದ್ದು ಬೀಗಿರುವ ಭಾರತ ತಂಡ ವಿಶ್ವಕಪ್ ಟೂರ್ನಿಯನ್ನಾಡಲು(ICC World Cup 2023) ಸಜ್ಜುಗೊಂಡಿದೆ. ಟೂರ್ನಿಯ ಪೂರ್ವ ಭಾಗವಾಗಿ ನಡೆಯುವ ಅಭ್ಯಾಸ ಪಂದ್ಯದಲ್ಲಿ(India vs England, 4th Warm-up game) ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅದೃಷ್ಟ ಪರೀಕ್ಷೆ ಇಳಿಯಲಿದೆ. ಇತ್ತಂಡಗಳ ಈ ಮುಖಾಮುಖಿ ಇಂದು ಮಧ್ಯಾಹ್ನ ಗುವಾಹಟಿಯಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ತಂಡ. ಜಾನಿ ಬೇರ್‌ಸ್ಟೊ, ಡೇವಿಡ್ ಮಲಾನ್, ಬ್ರೂಕ್, ಲಿವಿಂಗ್‌ಸ್ಟೋನ್, ನಾಯಕ ಜಾಸ್ ಬಟ್ಲರ್ ಮತ್ತು ನಿವೃತ್ತಿ ವಾಪಸ್ ಪಡೆದು ತಂಡಕ್ಕೆ ಮರಳಿರುವ ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಭಾರತದ ನೆಲದಲ್ಲಿ ಈ ಎಲ್ಲ ಆಟಗಾರರು ಐಪಿಎಲ್ ಆಡಿರುವ ಅನುಭವ ಹೊಂದಿರುವ ಕಾರಣ ಇವರೆಲ್ಲರಿಗೆ ಇಲ್ಲಿನ ಪಿಚ್ನಲ್ಲಿ ಆಡುವುದು ಕಷ್ಟಕರವಾಗದು. ಸ್ಪಿನ್ ದಾಳಿಯುನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಸಾಮರ್ಥ್ಯ ಇವರಿಗಿದೆ. ಹೀಗಾಗಿ ಈ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ.
ಅಕ್ಷರ್ ಪಟೇಲ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಬದಲು ಸ್ಥಾನ ಪಡೆದ ಅನುಭವಿ ಸ್ಪಿನ್ ಆಲ್ರೌಂಡರ್ ಆರ್.ಅಶ್ವಿನ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿ ಅವರು ತೋರುವ ಪ್ರದರ್ಶನವನ್ನು ಮನಗಂಡು ಲೀಗ್ ಹಂತದಲ್ಲಿ ಆಯ್ಕೆ ಮಾಡುವ ಯೋಜನೆಯಲ್ಲಿದೆ ಬಿಸಿಸಿಐ.
ಉಭಯ ತಂಡಗಳು
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೇರ್ಸ್ಟೋ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್ ಸ್ಟೋನ್, ಡೇವಿಡ್ ಮಾಲನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್.
10 ತಾಣಗಳಲ್ಲಿ ಪಂದ್ಯವಾಳಿ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.