ಚೆನ್ನೈ: ಆಸ್ಟ್ರೇಲಿಯಾ(India vs Australia) ವಿರುದ್ಧ ಕಣಕ್ಕಿಳಿಯುವ(ICC World Cup 2023) ಮುನ್ನವೇ ಭಾರತ ತಂಡದಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ತಂಡದ ಸ್ಟಾರ್ ಆರಂಭಿಕ ಆಟಗಾರ ಶುಭಮನ್ ಗಿಲ್ ಲಭ್ಯತೆ ಬಗ್ಗೆ ಇನ್ನೂ ಖಚಿತತೆ ಇಲ್ಲ. ಇದರ ಬೆನ್ನಲ್ಲೇ ಉಪನಾಯಕ ಹಾರ್ದಿಕ್ ಪಾಂಡ್ಯ ಗಾಯಗೊಂಡು ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತ ತಂಡ ಭಾನುವಾರ ಚೆನ್ನೈಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಆದರೆ ಪಂದ್ಯಕ್ಕೂ ಮುನ್ನ ಭಾರತಕ್ಕೆ ಚಿಂತೆಯೊಂದು ಕಾಡಿದೆ. ಹಾರ್ದಿಕ್ ಪಾಂಡ್ಯ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ಅಭ್ಯಾಸದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಗಿಲ್ ಮತ್ತು ಪಾಂಡ್ಯ ಈ ಪಂದ್ಯಕ್ಕೆ ಅಲಭ್ಯರಾದರೆ ಭಾರತಕ್ಕೆ ಹಿನ್ನಡೆಯಾಗುವುದು ಖಚಿತ ಎನ್ನಲಡ್ಡಿಯಿಲ್ಲ.
ಗಿಲ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ದ್ರಾವಿಡ್
ಗಿಲ್ ಆರೋಗ್ಯದ ಬಗ್ಗೆ ಶುಕ್ರವಾರ ಸಂಜೆ ತಂಡದ ಕೋಚ್ ರಾಹುಲ್ ದ್ರಾವಿಡ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶುಭಮನ್ ಗಿಲ್ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ಆತಂಕವಿಲ್ಲ. ಅವರಲ್ಲಿ ಡೆಂಗ್ಯೂವಿನ ಪ್ರಾಥಮಿಕ ಲಕ್ಷಣಗಳು ಮಾತ್ರ ಕಂಡುಬಂದಿದೆ. ಆದರೆ ಅವರನ್ನು ತಂಡದಿಂದ ಹೊರಗಿಡಲಾಗಿಲ್ಲ. ಅಲಭ್ಯತೆಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ನಮ್ಮ ಬಳಿ ಇನ್ನೂ 36 ಗಂಟೆಗಳ ಕಾಲಾವಕಾಶವಿದೆ. ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಎಂದು ರಾಹುಲ್ ದ್ರಾವಿಡ್ ಹೇಳಿದ್ದರು. ಇದೀಗ ಶನಿವಾರವೂ ಗಿಲ್ ಅಲಭ್ಯತೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇಶಾನ್ ಕಿಶನ್ ಇನಿಂಗ್ಸ್ ಆರಂಭ
ಒಂದೊಮ್ಮೆ ಶುಭಮನ್ ಗಿಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದರೆ, ಅವರ ಸ್ಥಾನದಲ್ಲಿ ಏಡಗೈ ಆಟಗಾರ ಇಶಾನ್ ಕಿಶನ್ ಆಡಲಿದ್ದಾರೆ. ರಾಹುಲ್ ಅವರು ಕೀಪಿಂಗ್ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಚೆನ್ನೈಯಲ್ಲಿ ಹಿಂಗಾರು ಮಾರುತ ಆರಂಭಗೊಂಡ ಪರಿಣಾಮ ಈ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ. ಹಾರ್ದಿಕ್ ಪಾಂಡ್ಯ ಅವರು ಅಲಭ್ಯರಾದರೆ ಅವರ ಸ್ಥಾನದಲ್ಲಿ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಅಥವಾ ಶಾರ್ದೂಲ್ ಠಾಕೂರ್ ಬ್ಯಾಟ್ ಬೀಸುವ ಸಾಧ್ಯತೆ ಇದೆ.
ಇದನ್ನೂ ಓದಿ South Africa vs Sri Lanka: ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಸಿಂಹಳಿಯರ ಪಡೆ?
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಸೂರ್ಯಕುಮಾರ್ ಯಾದವ್.
ಭಾರತ ಪಂದ್ಯದ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 14 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ನೆದರ್ಲೆಂಡ್ಸ್ – 12 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು