ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಾಗಲೇ ಸಿದ್ಧತೆ ಆರಂಭಿಸಿದೆ. ಇದೀಗ ಈ ಟೂರ್ನಿಯ ಬಗೆಗಿನ ಮಹತ್ವದ ವಿಚಾರವೊಂದು ಹೊರಬಿದ್ದಿದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಕ್ಟೋಬರ್ 5ರಂದು ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 19ಕ್ಕೆ ಅಹಮದಾಬಾದ್ನಲ್ಲಿ(Ahmedabad) ಫೈನಲ್ ನಡೆಯಲಿದೆ. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗಾಗಿ ಕನಿಷ್ಠ 10ಕ್ಕೂ ಹೆಚ್ಚು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಈ ಪಟ್ಟಿಯಲ್ಲಿ ಸೇರಿವೆ ಎನ್ನಲಾಗಿದೆ.
ಈ ಹಿಂದೆ ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ನೆಲದಲ್ಲಿ ಆಡದಿದ್ದರೆ ಪಾಕಿಸ್ತಾನ ತಂಡವೂ ಭಾರತದಿಂದ ಹೊರಗೆ ವಿಶ್ವ ಕಪ್ ಪಂದ್ಯಗಳನ್ನು ಆಡುವುದಾಗಿ ತಿಳಿಸಿತ್ತು. ಆದರೆ ಸದ್ಯದ ವರದಿಯೊಂದರ ಪ್ರಕಾರ ಪಾಕಿಸ್ಥಾನ ಭಾರತದಲ್ಲೇ ಪಂದ್ಯಗಳನ್ನು ಆಡಲಿದೆ ಎಂದು ವರದಿಯಾಗಿದೆ. ಈ ಮೂಲಕ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ 7 ವರ್ಷಗಳ ಬಳಿಕ ಕ್ರಿಕೆಟ್ ಆಡಲು ವೇದಿಕೆಯೊಂದು ಸಜ್ಜಾದಂತಿದೆ. ಪಾಕಿಸ್ತಾನ 2016ರಲ್ಲಿ ಕೊನೆಯದಾಗಿ ಭಾರತದ ನೆಲದಲ್ಲಿ ಪಂದ್ಯ ಆಡಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಚೆನ್ನೈನಲ್ಲಿ ನಡೆಯುವ ಸಾಧ್ಯತೆಯಿದೆ. ಪಾಕಿಸ್ತಾನದ ಹೆಚ್ಚಿನ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆಯಲಿದೆ. ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ನಡೆಯಲಿದೆ.
ಇದನ್ನೂ ಓದಿ ICC World Cup 2023: ಐಸಿಸಿ ಏಕದಿನ ವಿಶ್ವಕಪ್ ಲೋಗೋ ಅನಾವರಣ
48 ಪಂದ್ಯಗಳು
ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಫೈನಲ್‌ನ ಹೊರತಾಗಿ ಬಿಸಿಸಿಐ ಇನ್ನೂ ಯಾವುದೇ ಪಂದ್ಯಗಳಿಗೆ ನಿರ್ದಿಷ್ಟ ಸ್ಥಳ ಅಥವಾ ತಂಡಗಳು ಅಭ್ಯಾಸ ಮಾಡುವ ನಗರಗಳನ್ನು ಅಂತಿಮಗೊಳಿಸಿಲ್ಲ. ಅಲ್ಲದೇ ಅಕ್ಟೋಬರ್-ನವೆಂಬರ್ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಇದರ ಬಗ್ಗೆಯೂ ಚಿಂತಿಸಿ ಬಿಸಿಸಿಐ ಅಂತಿಮ ನಿರ್ಧಾರವನ್ನು ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ.