Site icon Vistara News

ICC World Cup 2023: ಪಾಕಿಸ್ತಾನಕ್ಕೆ ಭೇಟಿ ನೀಡಿದ ಐಸಿಸಿ ಮುಖ್ಯಸ್ಥರು

International Cricket Council (ICC) Chairman Greg Barclay (R) and ICC CEO Geoff Allardice

ಕರಾಚಿ: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗಳ ನಡುವಿನ ಏಷ್ಯಾ ಕಪ್(Asia Cup 2023)​ ಆತಿಥ್ಯದ ತಿಕ್ಕಾಟ ಇನ್ನೂ ಕೊನೆಗೊಂಡಿಲ್ಲ. ಇದಕ್ಕೂ ಮುನ್ನವೇ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ವಿಚಾರವಾಗಿ ಪಾಕ್​ ಕ್ರಿಕೆಟ್​ ಮಂಡಳಿ ಜತೆ ಚರ್ಚಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಮತ್ತು ಸಿಇಒ ಲಾಹೋರ್‌ಗೆ ತೆರಳಿದ್ದಾರೆ.

ಏಷ್ಯಾ ಕಪ್​ನಲ್ಲಿ ಭಾರತ ಆಡದಿದ್ದರೆ ಪಾಕಿಸ್ತಾನ ಕೂಡ ಭಾರತದಲ್ಲಿ ನಡೆಯುವ ವಿಶ್ವ ಕಪ್​ ಟೂರ್ನಿಯನ್ನು ಭಹಿಷ್ಕರಿಸಲಿದೆ ಎಂದು ಪಾಕ್​ ಮಂಡಳಿ ಬಿಸಿಸಿಐಗೆ ಎಚ್ಚರಿಕೆ ನೀಡಿತ್ತು. ಜತೆಗೆ ಟೂರ್ನಿಯನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸುವಂತೆ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್​ಗೆ ಒತ್ತಾಯಿಸಿತ್ತು. ಇದೀಗ ಇದೇ ವಿಚಾರವಾಗಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಜತೆ ಮಹತ್ವದ ಚರ್ಚೆ ನಡೆಸಲು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡಿಸ್ ಲಾಹೋರ್‌ಗೆ ತೆರಳಿದ್ದಾರೆ.

ಏಷ್ಯಾಕಪ್​ ಆಡಲು ಭಾರತ ಪಾಕಿಸ್ತಾನಕ್ಕೆ ಬಂದಲ್ಲಿ ಮಾತ್ರ ಪಾಕ್​ ಸರ್ಕಾರ ತಮ್ಮ ತಂಡವನ್ನು ಭಾರತದಲ್ಲಿ ನಡೆಯುವ ವಿಶ್ವಕಪ್​ಗೆ ಕಳುಹಿಸಲು ಒಪ್ಪಿಗೆ ಕೊಡುತ್ತದೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆಯ ಪ್ರಶ್ನೆ ಎತ್ತಿರುವ ಬಿಸಿಸಿಐ ಮತ್ತು ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಭಾರತ ತಂಡವನ್ನು ಪಾಕ್​ಗೆ​ ಕಳಿಸಲು ಸಿದ್ಧರಿಲ್ಲ ಎಂದು ಹೇಳಿತ್ತು. ಜತೆಗೆ ಟೂರ್ನಿಯನ್ನು ಹೈಬ್ರಿಡ್​ ಮಾದರಿಯ ಬದಲು ಸ್ಥಳಾಂತರ ಮಾಡುವಂತೆಯೂ ಒತ್ತಾಯಿಸಿತ್ತು. ಇದಕ್ಕೆ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶವು ಆಸಕ್ತಿ ತೋರಿತ್ತು. ಆದರೆ ಪಾಕ್​ ಮಾತ್ರ ಹೈಬ್ರಿಡ್​ ಮಾದರಿಯಲ್ಲೇ ನಡೆಯಬೇಕು ಎಂದು ಹಠಹಿಡಿದು ಕುಳಿತಿದೆ.

ಇದನ್ನೂ ಓದಿ Asia Cup 2023: ಐಪಿಎಲ್​ ಫೈನಲ್​ ಬಳಿಕ ಏಷ್ಯಾಕಪ್ ಭವಿಷ್ಯ ನಿರ್ಧಾರ; ಜಯ್​ ಶಾ

ಮೂಲಗಳ ಮಾಹಿತಿ ಪ್ರಕಾರ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡಿಸ್ ಲಾಹೋರ್‌ಗೆ ತೆರಳಿ ಪಾಕ್​ ಕ್ರಿಕೆಟ್​ ಮಂಡಳಿಯ ಜತೆ ಸುದೀರ್ಘ ಮಾತುಕತೆ ನಡೆಸಿದರೂ ಪಾಕ್​ ಮಂಡಳಿ ಹೈಬ್ರಿಡ್ ಮಾದರಿಯಿಂದ ಹಿಂದೆಸರಿದಿಲ್ಲ ಎಂದು ತಿಳಿದುಬಂದಿದೆ. ಗುರುವಾರ ನಡೆಯುವ ಅಂತಿಮ ಸುತ್ತಿನ ಮಾತುಕತೆಯಲ್ಲಿ ಪಾಕ್​ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕಾದು ನೋಡಬೇಕಿದೆ.

Exit mobile version