Site icon Vistara News

ICC World Cup 2023 : ಪಂದ್ಯ ಟೈ ಆದರೆ, ಮಳೆ ಬಂದರೆ ಫಲಿತಾಂಶ ಪ್ರಕಟಿಸುವುದು ಹೇಗೆ?

Final match

ಬೆಂಗಳೂರು: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್​​ನಲ್ಲಿ (ICC World Cup 2023 Final) ಭಾರತ ತಂಡ ಆಸ್ಟ್ರೇಲಿಯಾ (india vs Australia Final) ವಿರುದ್ಧ ಸೆಣಸಲಿದೆ. ಫೈನಲ್ ಸಮೀಪಿಸುತ್ತಿದ್ದಂತೆ ಅಬ್ಬರ ಜಾಸ್ತಿಯಾಗುತ್ತಿದೆ. ಅದರೆ, ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿರುವ ಒಂದೇ ಒಂದು ಅನುಮಾನವೆಂದರೆ ಫೈನಲ್ ಪಂದ್ಯ ಮಳೆಗೆ ಕೊಚ್ಚಿ ಹೋದರೆ ಫಲಿತಾಂಶವನ್ನು ಹೇಗೆ ಪ್ರಕಟಿಸಲಾಗುತ್ತದೆ ಎಂಬುದು. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮೀಸಲು ದಿನವಿದೆಯೇ?

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023 ರ ಕ್ರಿಕೆಟ್ ವಿಶ್ವಕಪ್​ನ ನಾಕೌಟ್ ಸುತ್ತುಗಳಿಗೆ ಮೀಸಲು ದಿನಗಳನ್ನು ನಿಗದಿಪಡಿಸಿದೆ. ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನಕ್ಕೆ ಯಾವುದೇ ಅವಕಾಶವಿರಲಿಲ್ಲ. ಆದರೆ ನಾಕೌಟ್ ಪಂದ್ಯಗಳು ಮೀಸಲು ಪಂದ್ಯದ ದಿನಗಳನ್ನು ಹೊಂದಿವೆ. ಹೀಗಾಗಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸೋಮವಾರ ಪಂದ್ಯ ಮರು ನಿಗದಿಯಾಗಲಿದೆ.

ಮೀಸಲು ದಿನದ ನಿಯಮಗಳು ಯಾವುವು?

ಐಸಿಸಿ ವಿಶ್ವಕಪ್ ನಿಯಮ ಪ್ರಕಾರ, ಮೀಸಲು ದಿನವನ್ನು ಈ ಕೆಳಗಿನ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ.

ಆಟದ ಸಮಯ: ಮೀಸಲು ದಿನವು ಯಾವುದೇ ಹೆಚ್ಚುವರಿ ಸಮಯದ ನಿಯಂತ್ರಣ ಒಳಗೊಂಡಂತೆ ನಿಗದಿತ ದಿನದಂತೆಯೇ ಆಟವನ್ನು ಮುಂದುವರಿಸಲಾಗುತ್ತದೆ.

ಆಟದ ಅಡಚಣೆ: ನಿಗದಿತ ದಿನದಂದು ಆಟಕ್ಕೆ ಅಡ್ಡಿಯಾದರೆ, ಅಂಪೈರ್​ಗಳು ಹೆಚ್ಚುವರಿ ಸಮಯವನ್ನು ಬಳಸಿಕೊಳ್ಳುತ್ತಾರೆ. ಮೀಸಲು ದಿನದಂದು ಫಲಿತಾಂಶವನ್ನು ಪ್ರಕಟಿಸಲು ಓವರ್​ಗಳ ಸಂಖ್ಯೆ ಕಡಿಮೆ ಮಾಡಬಹುದು.

ಕನಿಷ್ಠ ಓವರ್​ಗಳು: ಫಲಿತಾಂಶವನ್ನು ಪ್ರಕಟಿಸಲು ಪ್ರತಿ ತಂಡವು ಕನಿಷ್ಠ 20 ಓವರ್​ಗಳವರೆಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಹೊಂದಿರಬೇಕು.

ಮೀಸಲು ದಿನ: ನಿಗದಿತ ದಿನದಂದು ಕಟ್-ಆಫ್ ಸಮಯದೊಳಗೆ ಆಟವು ಸಾಧ್ಯವಾಗದಿದ್ದರೆ ಮತ್ತು ಪಂದ್ಯವನ್ನು ಪೂರ್ಣಗೊಳಿಸಲು ಮೀಸಲು ದಿನವನ್ನು ಬಳಸಲಾಗುತ್ತದೆ.

ಪುನರಾರಂಭ: ಮೀಸಲು ದಿನದಂದು, ನಿಗದಿತ ದಿನದಂದು ಎಸೆದ ಕೊನೆಯ ಎಸೆತದಿಂದ ಪಂದ್ಯ ಆರಂಭವಾಗುತ್ತದೆ. ಇದರರ್ಥ ಆಟ ನಿಂತು ಹೋದಲ್ಲಿಂದಲೇ ಮುಂದುವರಿಯುತ್ತದೆ.

ಟಾಸ್: ಟಾಸ್ ನಡೆದು ಒಂದೇ ಒಂದು ಎಸೆತ ಕಾಣದಿದ್ದರೂ ಟಾಸ್ ಫಲಿತಾಂಶ ಮತ್ತು ಹೆಸರಿಸಲಾದ ತಂಡಗಳು ಮೀಸಲು ದಿನಕ್ಕೂ ಮುಂದುವರಿಯಬೇಕು.

ಅಂಪೈರ್ ಗಳ ನಿರ್ಧಾರಗಳು: ಮೈದಾನ, ಹವಾಮಾನ ಮತ್ತು ಬೆಳಕಿನ ಪರಿಸ್ಥಿತಿಗಳನ್ನು ಪರಿಗಣಿಸಿ ಮೀಸಲು ದಿನಕ್ಕೆ ಅವಕಾಶ ಕೊಡದಂತೆ ನಿಗದಿತ ದಿನದಂದು ಆಟವನ್ನು ಪೂರ್ಣಗೊಳಿಸುವ ಗುರಿಯನ್ನು ಅಂಪೈರ್ ಗಳು ಹೊಂದಿದ್ದಾರೆ. ಆದ್ದರಿಂದ ನಿಗದಿತ ದಿನದಂದು ಮಳೆ ಬಂದರೆ ಓವರ್ ಗಳು ಕಡಿಮೆಯಾಗುತ್ತವೆ.

ಉದಾಹರಣೆ 1: 50 ಓವರ್​ಗಳ ಆಟ ಪ್ರಾರಂಭವಾಗಿ 19 ಓವರ್ ವೇಳೆಗೆ ಅಡಚಣೆ ಉಂಟಾದರೆ…
ಓವರ್​ಗಳನ್ನು ಪ್ರತಿ ತಂಡಕ್ಕೆ 46ಕ್ಕೆ ಇಳಿಸಲಾಗುತ್ತದೆ. ಮತ್ತೊಂದು ಚೆಂಡನ್ನು ಎಸೆಯುವ ಮೊದಲು ಮಳೆಯಾಗಿ ಪಂದ್ಯ ನಡೆಸಲು ಸಾಧ್ಯವಾಗದೇ ಹೋದರೆ ಮೀಸಲು ದಿನಕ್ಕೆ ಪಂದ್ಯ ಹೋಗುತ್ತದೆ ಹಾಗೂ ಅಲ್ಲಿ ಮತ್ತೆ50 ಓವರ್​ಗಳ ಪಂದ್ಯವನ್ನೇ ಆಡಿಸಲಾಗುತ್ತದೆ.

ಇದನ್ನೂ ಓದಿ: ICC World Cup 2023 : ಫೈನಲ್ ಪಂದ್ಯಕ್ಕಾಗಿ ನಡೆಯಿತು ಭರ್ಜರಿ ಫೊಟೋಶೂಟ್​

ಉದಾಹರಣೆ 2: 50 ಓವರ್ ಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು 19 ಓವರ್ ಗಳಲ್ಲಿ ಅಡಚಣೆ ಉಂಟಾದರೆ, ಪಂದ್ಯವನ್ನು 46 ಓವರ್​ಗಳಿಗೆ ಇಳಿಸಲಾಗುತ್ತದೆ. ಒಂದು ವೇಳೆ ಪಂದ್ಯ ಪುನರಾರಂಭಗೊಂಡ ಬಳಿಕ ಒಂದು ಓವರ್ ಆಟ ನಡೆದ ಬಳಿಕ ಮಳೆ ಬಂದರೆ ಮೀಸಲು ದಿನದಂದೂ 46 ಓವರ್​ಗಳ ಪಂದ್ಯ ನಡೆಯಬೇಕು. ಮೀಸಲು ದಿನದಂದು ಅಗತ್ಯವಿದ್ದರೆ ಓವರ್​ಗಳನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಪಂದ್ಯ ಟೈ ಆದರೆ ಇರುವ ನಿಯಮಗಳೇನು?

ಐಸಿಸಿ ವಿಶ್ವಕಪ್ ನಿಯಮ ಪುಸ್ತಕದ ಕಲಂ 16ರ ಪ್ರಕಾರ, ಪಂದ್ಯವು ಟೈ ಆಗಿರುವಾಗ ಈ ನಿಯಮಗಳು ಇರುತ್ತವೆ.

16.3.1.1: ಎರಡೂ ಇನ್ನಿಂಗ್ಸ್ ಗಳು ಪೂರ್ಣಗೊಂಡಾಗ ಮತ್ತು ಸ್ಕೋರ್ ಗಳು ಸಮಾನವಾಗಿದ್ದರ ಪಂದ್ಯದ ಫಲಿತಾಂಶವು ಟೈ ಆಗಿರುತ್ತದೆ.
16.3.1.2: ವಿಶ್ವ ಕಪ್​ನಲ್ಲಿ ಆರಂಭದಿಂದ ಕೊನೇ ತನಕ ಪಂದ್ಯ ಸಮಬಲಗೊಂಡರೆ ಸೂಪರ್ ಓವರ್ ಆಡಲಾಗುತ್ತದೆ. ಸೂಪರ್ ಓವರ್ ಟೈ ಆಗಿದ್ದರೆ ವಿಜೇತರು ಯಾರೆಂದು ಪ್ರಕಟವಾಗುವವರೆಗೆ ಸೂಪರ್ ಓವರ್​ಗಳನ್ನು ಆಡಿಸಬೇಕು. ಅಸಾಧಾರಣ ಸಂದರ್ಭಗಳು ಉದ್ಭವಿಸದ ಹೊರತು, ಫಲಿತಾಂಶವನ್ನು ಸಾಧಿಸಲು ಅನಿಯಮಿತ ಸಂಖ್ಯೆಯ ಸೂಪರ್ ಓವರ್​ಗಳನ್ನು ನಿಗದಿ ಮಾಡಬೇಕು.

ಸೂಪರ್ ಓವರ್ ಸಾಧ್ಯವಾಗದೇ ಹೋದರೆ?

ಕಲಂ 16.10.4 ರ ಪ್ರಕಾರ, ಟೈ ನಂತರ, ಹವಾಮಾನ ಪರಿಸ್ಥಿತಿಗಳು ಸೂಪರ್ ಓವರ್ ಪೂರ್ಣಗೊಳ್ಳದಂತೆ ತಡೆದರೆ, ಅಥವಾ ಪಂದ್ಯವನ್ನು ರದ್ದುಗೊಂಡರೆ ಅಥವಾ ಮೀಸಲು ದಿನದ ಕೊನೆಯಲ್ಲಿ ಫಲಿತಾಂಶ ಪ್ರಕಟವಾಗದೇ ಹೋದರೆ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

ಸೂಪರ್ ಓವರ್ ಆಡಿಸುವ ಪ್ರಮುಖ ನಿಯಮಗಳು

  1. ಎರಡು ವಿಕೆಟ್ ಕಳೆದುಕೊಂಡಾಗ ಬ್ಯಾಟಿಂಗ್ ತಂಡದ ಒಂದು ಓವರ್ ಕಡಿಮೆಯಾಗುತ್ತದೆ.
  2. ಐಸಿಸಿ ಮ್ಯಾಚ್ ರೆಫರಿ ನಿರ್ಧರಿಸುವ ಸಮಯದಲ್ಲಿ ಪಂದ್ಯದ ನಿಗದಿತ ದಿನದಂದು ಸೂಪರ್ ಓವರ್ ನಡೆಯಬೇಕು. ಸಾಮಾನ್ಯ ಸಂದರ್ಭಗಳಲ್ಲಿ ಪಂದ್ಯ ಮುಗಿದ 5 ನಿಮಿಷಗಳ ನಂತರ ಇದು ಪ್ರಾರಂಭವಾಗುತ್ತದೆ.
  3. ಪಂದ್ಯದಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕು.
  4. ಪ್ರತಿ ಸೂಪರ್ ಓವರ್​ಗೆ ತಲಾ ಒಂದು ಡಿಆರ್​ಎಸ್​ ಆಯ್ಕೆಯಿದೆ.
  5. ಫೀಲ್ಡಿಂಗ್ ತಂಡದ ನಾಯಕ ಅಂಪೈರ್​ಗಳ ಒದಗಿಸಿದ ಚೆಂಡುಗಳ ಪೆಟ್ಟಿಗೆಯಿಂದ ಸೂಪರ್ ಓವರ್​ನಲ್ಲಿ ಎಸೆಯುವ ಚೆಂಡನ್ನು ಆಯ್ಕೆ ಮಾಡಬೇಕು (ಇದರಲ್ಲಿ ಪಂದ್ಯದಲ್ಲಿ ಬಳಸಿದ ಚೆಂಡುಗಳು ಮಾತ್ರ ಇರುತ್ತವೆ. ಹೊಸ ಚೆಂಡುಗಳಿರುವುದಿಲ್ಲ ). ಎರಡನೇ ಫೀಲ್ಡಿಂಗ್ ಮಾಡುವ ತಂಡವು ಮೊದಲು ಬೌಲಿಂಗ್ ಮಾಡುವ ತಂಡವು ಆಯ್ಕೆ ಮಾಡಿದ ಅದೇ ಚೆಂಡನ್ನು ಬಳಸಲು ಆಯ್ಕೆ ಮಾಡಬಹುದು ಅಥವಾ ಅದೇ ಪೆಟ್ಟಿಗೆಯಿಂದ ಮತ್ತೊಂದು ಚೆಂಡನ್ನು ಆಯ್ಕೆ ಮಾಡಬಹುದು. ಚೆಂಡನ್ನು ಬದಲಾಯಿಸಬೇಕಾಗಿ ಬಂದರೆ ಆಟದ ಷರತ್ತುಗಳು ಸೂಪರ್ ಓವರ್​ಗೂ ಅನ್ವಯವಾಗುತ್ತದೆ.
Exit mobile version