ಕರಾಚಿ: ಏಕದಿನ ವಿಶ್ವಕಪ್ ಕ್ರಿಕೆಟ್(ICC World Cup 2023) ಮಹಾ ಸಮರಕ್ಕೆ ಇಂದು ಅಹಮದಾಬಾದ್ನಲ್ಲಿ ಅದ್ಧೂರಿ ಚಾಲನೆ ದೊರಕಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಸೆಣಸಾಡಲಿವೆ. ಈ ಬಾರಿಯ ವಿಶ್ವಕಪ್ನಲ್ಲಿ ಭಾರತವೇ ಕಪ್ ಗೆಲ್ಲುವ ಹಾಟ್ ಫೇವರಿಟ್ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್(Mohammad Amir) ಭವಿಷ್ಯ ನುಡಿದಿದ್ದಾರೆ.
“ನಿಸ್ಸಂಶಯವಾಗಿ ಭಾರತವೇ ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಭಾರತದ ವಿರುದ್ಧ ಯಾವುದೇ ತಂಡ ಆಡಿದರೂ, ಗೆಲುವಿಗಾಗಿ ತಮ್ಮ ಶೇಕಡಾ 110 ರಷ್ಟು ಉತ್ತಮ ಪ್ರದರ್ಶನ ನೀಡಬೇಕು. ಭಾರತವನ್ನು ತವರು ನೆಲದಲ್ಲಿ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಉದಾಹರಣೆಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಾಗ ಪ್ರತಿ ತಂಡವು ಹೋರಾಡುತ್ತದೆ. ಅಂತೆಯೇ ಪ್ರತಿ ತಂಡವು ಭಾರತಕ್ಕೆ ಭೇಟಿ ನೀಡಿದಾಗಲೂ ಗೆಲುವಿಗೆ ಕಷ್ಟಪಡುತ್ತದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಅತ್ಯಂತ ಬಲಿಷ್ಠ ತಂಡವಾಗಿ ಗೋಚರಿಸಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ” ಎಂದು ಹೇಳಿದರು.
ಕ್ರಿಕೆಟ್‌ಗೆ ಹಠಾತ್ ನಿವೃತ್ತಿ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಆಮಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದರು. ರಮೀಜ್ ರಾಜಾ ಆಡಳಿತದ ಅವಧಿಯಲ್ಲಿ ಆಮೀರ್ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದರು.
2010ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಆಮಿರ್ ಕೆಲ ವರ್ಷ ನಿಷೇಧ ಶಿಕ್ಷೆ ಎದುರಿಸಿದ್ದರು. ನಂತರ ಕಾನೂನು ಹೋರಾಟ ನಡೆಸಿ ಆಜೀವ ನಿಷೇಧ ಶಿಕ್ಷೆಯಿಂದ ವಿನಾಯಿತಿ ಪಡೆದು 2016ರಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಪಾಕ್ ಪರ ಆಮಿರ್ 36 ಟೆಸ್ಟ್, 61 ಏಕ ದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಡಗೈ ವೇಗಿಯಾಗಿದ್ದ ಅವರು ಸ್ವಿಂಗ್ ಮತ್ತು ಯಾರ್ಕರ್ ಬೌಲಿಂಗ್ ಮೂಲಕ ಖ್ಯಾತಿ ಪಡೆದಿದ್ದರು. ಸದ್ಯ ಅವರು ಟಿ20 ಲೀಗ್ನಲ್ಲಿ ಮಾತ್ರ ಆಡುತ್ತಿದ್ದಾರೆ.
ಇದನ್ನೂ ಓದಿ ICC World Cup 2023: ಹೈದರಾಬಾದ್ ಬಿರಿಯಾನಿಗೆ ಮನಸೋತ ಪಾಕ್ ಆಟಗಾರರು; ತವರಿಗೆ ಹೋಗಲು ಹಿಂದೇಟು
ಭಾರತ-ಪಾಕ್ ಪಂದ್ಯ
ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬೀನ್ ಮಾದರಿಯಲ್ಲಿ ಪಂದ್ಯಗಳನ್ನು ಆಡಿಸಲಾಗಿತ್ತದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.