ಮುಂಬಯಿ: ಏಕದಿನ ವಿಶ್ವಕಪ್‌ನಲ್ಲಿ(ICC World Cup 2023) ಯಾವ ತಂಡ ಗೆಲ್ಲಬಹುದೆಂದು ಮತ್ತು ಸೆಮಿಫೈನಲ್ ಪ್ರವೇಶ ಪಡೆಯಬಹುದು ಎಂದು ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದ್ದಾರೆ. ಹೆಚ್ಚಾಗಿ ಎಲ್ಲರು ಭಾರತವೇ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಭಾರತ ತಂಡ ಮಾಜಿ ಆಟಗಾರ ಇರ್ಫಾನ್ ಪಠಾಣ್(irfan pathan) ಕೂಟ ತಮ್ಮ ಆಯ್ಕೆ ನಾಲ್ಕು ಸೆಮಿಫೈನಲ್ ತಂಡವನ್ನು ಪ್ರಕಟಿಸಿದ್ದಾರೆ.
ವಿಶ್ವಕಪ್ ಕುರಿತು ನಡೆಸಿದ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ 2007ರ ವಿಶ್ವಕಪ್ ವಿಜೇತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಗಂಭೀರ್ ಪ್ರಕಾರ ಆಸೀಸ್ ಚಾಂಪಿಯನ್
2011ರ ವಿಶ್ವಕಪ್‌ನಲ್ಲಿ ಆಡಿದ್ದ ಮಾಜಿ ಆಟಗಾರ ಗೌತಮ್ ಗಂಭೀರ್(gautam gambhir) ಈ ಬಾರಿ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಗೆಲ್ಲಲಿದೆ. ಈ ತಂಡದಲ್ಲಿ ಉತ್ತಮ ಆಲ್‌ರೌಂಡರ್, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಕಪ್ ಗೆಲ್ಲುವುದು ಕಷ್ಟ ಆದರೆ ಫೈನಲ್ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್ ಕಟ್ಟಬಲ್ಲ ಆಟಗಾರರು ವಿಶ್ವಕಪ್ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ ಎಂದು ಹೇಳಿದ್ದಾರೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ವಿರುದ್ಧ ಆಡುವ ಮೂಲಕ ಆಸ್ಟ್ರೇಲಿಯಾ ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್ಗಳು
ಯುವಿ ಹೇಳಿದ ಭವಿಷ್ಯವೇನು?
ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಕೂಡ ಭಾರತ ಈ ಬಾರಿ ವಿಶ್ವಕಪ್ ಗೆಲ್ಲುವುದು ಅನುಮಾನ ಎಂದು ಹೇಳಿದ್ದರು. ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ ಯುವರಾಜ್ ಸಿಂಗ್, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್ ಗೆಲ್ಲುವುದು ಕಷ್ಟ” ಎಂದು ಹೇಳಿದ್ದರು.
“ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಮಸ್ಯೆ ಎದ್ದು ಕಾಣುತ್ತಿದೆ. 4 ಮತ್ತು 5 ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ತಂಡದ ಗೆಲುವನನ್ನು ನಿರ್ಧರಿಸಿತ್ತದೆ. ಆದರೆ ಸದ್ಯ ಭಾರತ ತಂಡದಲ್ಲಿ ಈ ಸ್ಥಾನಕ್ಕೆ ಸೂಕ್ತ ಆಟಗಾರ ಇಲ್ಲ. ಕಳೆದ ಕೆಲ ವರ್ಷಗಳಿಂದಲೂ ತಂಡಕ್ಕೆ ಇದುವೇ ಹಿನ್ನಡೆಯಾಗಿದೆ. 2011 ವಿಶ್ವ ಕಪ್ನಲ್ಲಿ ತಂಡ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠವಾಗಿತ್ತು. ಹೀಗಾಗಿ ತಂಡ ಕಪ್ ಗೆಲ್ಲುವಲ್ಲಿ ಸಹಕಾರಿಯಾಯಿತು. ಇನ್ನು ಗಾಯದ ಸಮಸ್ಯೆಯೂ ಭಾರತಕ್ಕೆ ಹಿನ್ನಡೆಯಾಗಿದೆ” ಹೀಗಾಗಿ ಭಾರತ ಕಪ್ ಗೆಲ್ಲುವುದು ಅನುಮಾನ ಎಂದು ಯುವರಾಜ್ ಹೇಳಿದ್ದರು.