ನವದೆಹಲಿ: ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ನಲ್ಲಿ(ICC World Cup 2023) ಪಾಕಿಸ್ತಾನದ ಭಾಗಿಯಾಗುವ ಕುರಿತಂತೆ ಇದ್ದ ಎಲ್ಲ ಅನುಮಾನಗಳು ಕಳೆದ ವಾರ ಇತ್ಯರ್ಥಗೊಂಡಿತ್ತು. ಪಾಕ್ ವಿದೇಶಾಂಗ ಇಲಾಖೆಯು ಪಾಕ್ ಕ್ರಿಕೆಟ್ ತಂಡಕ್ಕೆ ಭಾರತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿತ್ತು. ಇದೀಗ ಭಾರತಕ್ಕೆ ಬರುವ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ನೀಡಲಾಗುವುದಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.
ಕಳೆದ ವಾರ ಪಾಕ್ ವಿದೇಶಾಂಗ ಸಚಿವಾಲಯ(Ministry of Foreign Affairs of Pakistan) ಭಾರತಕ್ಕೆ ತಮ್ಮ ತಂಡವನ್ನು ಕಳಿಸುವು ವಿಚಾರವನ್ನು ಪ್ರಕಟಿಸಿತ್ತು. ‘ಪಾಕಿಸ್ತಾನವು ಮೊದಲಿನಿಂದಲೂ, ಕ್ರೀಡೆಯನ್ನು ರಾಜಕೀಯದಿಂದ ದೂರವೇ ಇಟ್ಟಿದೆ. ಹೀಗಾಗಿ, ನಾವು ಭಾರತಕ್ಕೆ ಕ್ರಿಕೆಟ್ ತಂಡ ಕಳುಹಿಸಲು ನಿರ್ಧರಿಸಿದ್ದೇವೆ. ಭಾರತದಲ್ಲೇ ನಡೆಯುವ 2023ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕ್ ತಂಡ ಭಾಗಿಯಾಗಲಿದೆ. ಅಲ್ಲದೆ, ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧದ ವಿವಾದದಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಪಂದ್ಯಾವಳಿ ಮೇಲೆ ಪರಿಣಾಮ ಬೀರಬಾರದು ಎಂಬುದು ನಮ್ಮ ಉದ್ದೇಶ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ವಿಶೇಷ ಭದ್ರತೆಯ ಮನವಿ
ಪಾಕಿಸ್ತಾನ ಕ್ರಿಕೆಟ್ ತಂಡದ ಭದ್ರತೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಇಲಾಖೆ, ನಾವು ಭಾರತದಲ್ಲಿ ಆಡುವ ಕುರಿತು ಆತಂಕ ಹೊಂದಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಬಳಿ ಚರ್ಚಿಸಿದ್ದೇವೆ. ನಮ್ಮ ತಂಡಕ್ಕೆ ಭಾರತದಲ್ಲಿ ಪೂರ್ಣ ಭದ್ರತೆ ಸಿಗಲಿದೆ ಎಂಬ ಭರವಸೆಯೂ ಇದೆ ಎಂದು ಹೇಳಿತ್ತು. ಅಲ್ಲದೆ ವಿಶ್ವಕಪ್‌ಗೂ ಮುನ್ನ ಭದ್ರತೆಯನ್ನು ಪರಿಶೀಲಿಸಲು ಪಾಕ್ನ ವಿಶೇಷ ತಂಡವನ್ನು ಭಾರತಕ್ಕೆ ಬರಲಿದೆ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಪಾಕಿಸ್ತಾನ ಸರ್ಕಾರದ ಈ ಮನವಿಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ಯಾವುದೇ ಕಾರಣಕ್ಕೂ ಹೆಚ್ಚುವರಿ ಭದ್ರತೆ ಇಲ್ಲ
ಪಾಕಿಸ್ತಾನದ ಮನವಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ(Ministry of External Affairs of India) ಅರಿಂದಮ್ ಬಾಗ್ಚಿ(Arindam Bagchi), ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಇತರ ಎಲ್ಲ ತಂಡಗಳಂತೆ ಪಾಕಿಸ್ತಾನ ತಂಡಕ್ಕೂ ಆತಿಥ್ಯ ನೀಡಲಾಗುತ್ತದೆ. ಯಾವುದೇ ವಿಶೇಷ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪಾಕ್ನ ಕುತಂತ್ರದ ಮನವಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಸ್ಪರ್ಶ
#WATCH | MEA spokesperson Arindam Bagchi says, "We have seen these reports regarding the Pakistan cricket team's participation in the upcoming ICC World Cup to be hosted by India. Pakistan cricket team will be treated just like the cricket team of any other country participating… pic.twitter.com/pOmTLomYd7
— ANI (@ANI) August 11, 2023
ಏಷ್ಯಾ ಕಪ್ ಆತಿಥ್ಯದ ಸೇಡು ತೀರಿಸಲು ಮುಂದಾಗಿದ್ದ ಪಾಕ್
ಸದ್ಯದಲ್ಲೇ ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದ್ದು, ಶ್ರೀಲಂಕಾ ಮತ್ತು ಪಾಕಿಸ್ತಾನ ಆಯೋಜನೆ ಮಾಡಲಿವೆ. ಪಾಕಿಸ್ತಾನ ಮಾತ್ರ ಏಷ್ಯಾ ಕಪ್ ಆಯೋಜನೆ ಮಾಡಬೇಕಿತ್ತು. ಆದರೆ, ಭಾರತ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲು ಒಪ್ಪದ ಕಾರಣದಿಂದಾಗಿ, ಅನಿವಾರ್ಯವಾಗಿ ಭಾರತದ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿದೆ. ಈ ವಿವಾದದಿಂದಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣ ಬೆಳೆಸುವುದು ಅನುಮಾನ ಎಂಬ ಮಾತುಗಳಿದ್ದವು. ಅಲ್ಲದೆ, ಕೆಲವೊಂದು ಕ್ರೀಡಾಂಗಣಗಳ ಬಗ್ಗೆಯೂ ಪಾಕಿಸ್ತಾನ ಕ್ಯಾತೆ ತೆಗೆದಿತ್ತು. ಆದರೆ ಎಲ್ಲ ವಿವಾದಗಳು ಅಂತ್ಯಗೊಂಡಿದ್ದು ಪಾಕಿಸ್ತಾನ ಭಾರತ ಪ್ರವಾಸ ಕೈಗೊಳಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯ ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.