ದುಬೈ: ಬಹುನಿರೀಕ್ಷಿತ ಭಾರತ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್(icc world cup 2023) ಟೂರ್ನಿಯ ವೇಳಾಪಟ್ಟಿ ಇದೇ ಜೂನ್ 27ಕ್ಕೆ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸದಿದ್ದರೂ ಸಂಸ್ಥೆಯ ಉನ್ನತ ಮೂಲವೊಂದು ಖಚಿತಪಡಿಸಿದೆ.
ಸದ್ಯದ ವರದಿಯ ಅನುಸಾರ ವಿಶ್ವಕಪ್ ವೇಳಾಪಟ್ಟಿಯನ್ನು(icc world cup 2023 schedule) ಇದೇ ಜೂನ್ 27ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ವಿಶೇಷವೆಂದರೆ ಈ ದಿನಾಂಕದಿಂದ ವಿಶ್ವಕಪ್ ಪ್ರಾರಂಭವಾಗುವ ದಿನಕ್ಕೆ ಭರ್ತಿ 100 ದಿನಗಳು ಮಾತ್ರ ಬಾಕಿ ಉಳಿಯಲಿವೆ. ಈ ಇದೇ ಕಾರಣಕ್ಕೆ ಐಸಿಸಿ ಈ ದಿನಾಂಕವನ್ನು ನಿಗಧಿಪಡಿಸಿದೆ ಎಂದು ತಿಳಿದುಬಂದಿದೆ. ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ನವೆಂಬರ್ 19 ತನಕ ನಡೆಯುವ ಸಾಧ್ಯತೆ ಇದೆ.
ವಾಸ್ತವವಾಗಿ ಈ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಪ್ರಕಟಗೊಳ್ಳಬೇಕಾಗಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ನಡುವಿನ ಕಿತ್ತಾಟದಿಂದ ಇದು ವಿಳಂಬಗೊಂಡಿದೆ. ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕ್ ನೆಲದಲ್ಲಿ ಆಡಲು ನಿರಾಕರಿಸಿದ ಕಾರಣ ಇದಕ್ಕೆ ಸೇಡು ತೀರಿಸಲು ಮುಂದಾಗಿರುವ ಪಾಕ್ ಭಾರತ ಕೆಲ ಮೈದಾನದಲ್ಲಿ ನಾವು ಪಂದ್ಯ ಆಡುವುದಿಲ್ಲ. ನಾವು ಹೇಳಿದ ಮೈದಾನದಲ್ಲೇ ಪಂದ್ಯ ಆಯೋಜಿಸಬೇಕು ಎಂದು ಪಟ್ಟು ಪಟ್ಟು ಹಿಡಿದಿದೆ.
ಇದನ್ನೂ ಓದಿ Asia Cup: ಏಷ್ಯಾ ಕಪ್ ವಿಚಾರದಲ್ಲಿ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ; ಟೂರ್ನಿ ನಡೆಯುವುದೇ ಅನುಮಾನ
ಸದ್ಯ ಐಸಿಸಿ ವೇಳಾಪಟ್ಟಿಯ ಕರಡು ಪ್ರತಿಯನ್ನು ಸಿದ್ಧಪಡಿಸಿ ಪಾಕ್ ಕ್ರಿಕೆಟ್ ಮಂಡಳಿಗೆ ಕಳುಹಿಸಿಕೊಟ್ಟಿದೆ. ಜತೆಗೆ ಎರಡು ದಿನಗಳ ಗಡುವನ್ನು ನೀಡಿದೆ. ಪಾಕ್ ನಿಂದ ಗ್ರೀನ್ ಸಿಕ್ಕ ಕೂಡಲೇ ಜೂನ್ 27ಕ್ಕೆ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ಎಂದು ಐಸಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
48 ಪಂದ್ಯಗಳು
ಒಟ್ಟು ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ಆಡಿಸಲಾಗುತ್ತದೆ. ಹೀಗಾಗಿ 46 ದಿನಗಳಲ್ಲಿ 48 ಪಂದ್ಯಗಳು ನಡೆಯಲಿವೆ. ಅಕ್ಟೋಬರ್-ನವೆಂಬರ್ನಲ್ಲಿ ಕೆಲ ಪ್ರದೇಶಗಳಲ್ಲಿ ಹಿಂಗಾರು ಮಳೆ ಸಾಧ್ಯತೆ ಇರುವುದರಿಂದ ಅಭ್ಯಾಸ ನಡೆಸುವ ತಾಣಗಳನ್ನು ಬಿಸಿಸಿಐ ಶಿಘ್ರದಲ್ಲೇ ಪ್ರಕಟಿಸಲಿದೆ ಎಂದು ವರದಿ ಮಾಡಿದೆ.