ನವದೆಹಲಿ: ಈಗಾಗಲೇ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup 2023) ವೇಳಾಪಟ್ಟಿ(world cup 2023 schedule) ಪ್ರಕಟಗೊಂಡಿದೆ. ಅಭ್ಯಾಸ ಪಂದ್ಯಗಳ ಪಟ್ಟಿಯೂ ಬಿಡುಗಡೆಗೊಂಡಿದೆ. ಇದೀಗ ಈ ಮಹತ್ವದ ಟೂರ್ನಿಯನ್ನು ಕಣ್ತುಂಬಿಕ್ಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಸಿಸಿಐ ಮತ್ತು ಐಸಿಸಿ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪಂದ್ಯಗಳ ಆನ್‌ಲೈನ್ ಟಿಕೆಟ್(world cup 2023 tickets) ಮಾರಾಟವು ಜುಲೈ 1(ಶನಿವಾರ)ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಟೂರ್ನಿ ದೇಶದ ಪ್ರಮುಖ 9 ನಗರಗಳಲ್ಲಿ ನಡೆಯುವ ಕಾರಣ ಹಲವು ಕಡೆಗಳಿಂದ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಬರುತ್ತಾರೆ. ಪ್ರಯಾಣದ ತೊಂದರೆಯನ್ನು ತಪ್ಪಿಸುವ ಸಲುವಾಗಿ ಬಹುಪಾಲು ಟಿಕೆಟ್‌ಗಳು ಆನ್‌ಲೈನ್‌ನಲ್ಲೇ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ. ಸ್ಟೇಡಿಯಂನಲ್ಲಿರುವ ಕೌಂಟರ್‌ಗಳಲ್ಲಿ ಕೆಲವೇ ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕಿಡಲು ಐಸಿಸಿ ಹಾಗೂ ಬಿಸಿಸಿಐ ನಿರ್ಧರಿಸಿವೆ ಎನ್ನಲಾಗಿದೆ.
ಟಿಕೆಟ್ ದರವನ್ನು ಪಂದ್ಯದ ಬೇಡಿಕೆಗೆ ತಕ್ಕಂತೆ ನಿಗದಿಪಡಿಸುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳ ಬೆಲೆ ಅಧಿಕವಾಗಿರುವ ಸಾಧ್ಯತೆ ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಂದಾಜು 500ರಿಂದ 10,000ದ ವರೆಗೂ ವಿವಿಧ ದರಗಳ ಟಿಕೆಟ್‌ಗಳು ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ. ಕಳೆದ ಟಿ20 ವಿಶ್ವ ಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್ ಮಾರಾಟ ಆರಂಭಗೊಂಡ 15ರಿಂದ 30 ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿತ್ತು. ಈ ಬಾರಿಯೂ ಇದೇ ರೀತಿ ಆಗುವ ನಿರೀಕ್ಷೆ ಇದೆ.
ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 15ರಂದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ನಿಗದಿಯಾಗಿದ್ದೇ ತಡ ಅಹಮದಾಬಾದ್ನಲ್ಲಿ ಹೋಟೆಲ್ ರೂಂಗಳ ಬೆಲೆ ಗಗನಕ್ಕೇರಿದೆ. ಸಾಮಾನ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಒಂದು ರಾತ್ರಿಗೆ 6,500-10,000 ರೂ. ಇರುವ ಬೆಲೆ ಅಕ್ಟೋಬರ್ 13ರಿಂದ 16ರ ನಡುವೆ ಬರೋಬ್ಬರಿ 50 ಸಾವಿರದಿಂದ 1 ಲಕ್ಷ ರೂ. ವರೆಗೂ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ನಗರದ ಹೋಟೆಲ್‌ಗಳು ಶೇ.80ರಷ್ಟು ಮುಂಗಡ ಬುಕಿಂಗ್ ಆಗಿವೆ ಎಂದು ವರದಿಯಾಗಿದೆ. ಹೀಗಾಗಿ ಟಿಕೆಟ್ ದರ ಎಷ್ಟೇ ಅಧಿಕವಾಗಿದ್ದರೂ ಜನರು ಖರೀದಿ ಮಾಡುವ ವಿಶ್ವಾಸದಲ್ಲಿ ಬಿಸಿಸಿಐ ಟಿಕೆಟ್ ದರವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಇದನ್ನೂ ಓದಿ Asia Cup | ಏಷ್ಯಾಕಪ್; ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ!
ಟಿಕೆಟ್ ಎಲ್ಲಿ ಲಭ್ಯ
ವಿಶ್ವದಾದ್ಯಂತದ ಕ್ರಿಕೆಟ್ ಉತ್ಸಾಹಿಗಳು ಮತ್ತು ಅಭಿಮಾನಿಗಳು ಅಧಿಕೃತ ಐಸಿಸಿ ಕ್ರಿಕೆಟ್ ವಿಶ್ವಕಪ್ ವೆಬ್ಸೈಟ್ನಿಂದ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಇದಲ್ಲದೆ, ಬುಕ್ ಮೈಶೋ, ಪೇಟಿಎಂ, ಪೇಟಿಎಂ ಇನ್ಸೈಡರ್ಸ್ನಲ್ಲಿಯೂ ಟಿಕೆಟ್‌ಗಳು ಲಭ್ಯವಿರುತ್ತವೆ. ಬಹುತೇಕ ಟಿಕೆಟ್‌ಗಳು ಆನ್ ಲೈನ್ ಮೂಲಕವೇ ಲಭ್ಯವಿರುತ್ತವೆ.
ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು