ಬೆಂಗಳೂರು: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ(ICC World Cup 2023) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ವೇಳಾಪಟ್ಟಿ ಸಮಸ್ಯೆ ಮುಗಿದಂತೆ ತೋರುತ್ತಿಲ್ಲ. ಕೆಲ ದಿನಗಳ ಹಿಂದೆ ಭಾರತ ಮತ್ತು ಪಾಕ್ ನಡುವಣ ಪಂದ್ಯದ ಬದಲಾವಣೆಯ ಕೋರಿಕೆ ಬೆನ್ನಲ್ಲೇ ಇದೀಗ ಮತ್ತೊಂದು ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಪಂದ್ಯದವೂ ಪಾಕಿಸ್ತಾನ ಪಾಲ್ಗೊಳ್ಳುವ ಪಂದ್ಯವಾಗಿದೆ.
ಪೂರ್ವ ನಿಗದಿಯಂತೆ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ನಡುವೆ ನವೆಂಬರ್ 12ರಂದು ಕೋಲ್ಕತಾದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಇದೀಗ ಈ ಪಂದ್ಯಕ್ಕೆ ಸಮಸ್ಯೆಯೊಂದು ಎದುರಾಗಿದೆ. ಇದೇ ದಿನ
ಬಂಗಾಳದ ಅತೀ ದೊಡ್ಡ ಹಬ್ಬವಾದ ಕಾಳಿ ಪೂಜೆ ನಡೆಯಲಿದೆ. ಈ ಹಬ್ಬದಲ್ಲಿ ಅಪಾರ ಸಂಖ್ಯೆಯ ಜನ ಸೇರಲಿದ್ದಾರೆ. ಹೀಗಾಗಿ ಈ ಪಂದ್ಯಕ್ಕೆ ಮತ್ತು ನಗರದಾದ್ಯಂತ ಏಕಕಾಲಕ್ಕೆ ಭದ್ರತೆ ಒದಗಿಸುವುದು ಸಮಸ್ಯೆಯಾಗಿ ಕಾಡುವ ಭೀತಿ ಇದೆ ಎಂದು ಇಲ್ಲಿನ ಭದ್ರತಾ ಹಾಗೂ ಪೊಲೀಸ್ ಇಲಾಖೆ ತಿಳಿಸಿದೆ. ಹೀಗಾಗಿ ಈ ಪಂದ್ಯದ ದಿನಾಂಕವನ್ನು ಬದಲಿಸುವಂತೆ ಅದು ಬಿಸಿಸಿಐ ಹಾಗೂ ಐಸಿಸಿಗೆ ಸೂಚಿಸಿದೆ. ಆದರೆ ಪಂದ್ಯ ಬದಲಾವಣೆಯ ಕುರಿತು ಕೋಲ್ಕತಾ ಕ್ರಿಕೆಟ್ ಮಂಡಳಿ (ಸಿಎಬಿ) ಅಧ್ಯಕ್ಷ ಸ್ನೇಹಶಿಷ್ ಗಂಗೂಲಿ ಪ್ರತಿಕ್ರಿಯಿಸಿದ್ದು, ಈ ಕುರಿತು ನಾವು ಯಾವುದೇ ಅಧಿಕೃತ ಮನವಿ ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ ICC Wtc Points Table: ದಂಡ ಬಿದ್ದ ಪರಿಣಾಮ ವಿಶ್ವ ಟೆಸ್ಟ್ ಅಂಕಪಟ್ಟಿಯಲ್ಲಿ ಕುಸಿತ ಕಂಡ ಇಂಗ್ಲೆಂಡ್,ಆಸೀಸ್
ಒಟ್ಟಾರೆ ಪಾಕಿಸ್ತಾನ ಆಡುತ್ತಿರುವ ಪಂದ್ಯಕ್ಕೆ ಒಂದಲ್ಲ ಒಂದು ಕಂಡಕ ಎದುರಾಗುತ್ತಲೇ ಇದೆ. ಮೊದಲು ಅಹಮದಾಬಾದ್ನಲ್ಲಿ ಅಕ್ಟೋಬರ್ 15ರಂದು ನಡೆಯಬೇಕಿದ್ದ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯವನ್ನು ನವರಾತ್ರಿ ಆರಂಭದ ಕಾರಣ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ನಡೆಸಬೇಕೆಂದು ಮೊದಲ ಕೋರಿಕೆ ಆಗಿತ್ತು. ಇದಾದ ಬಳಿಕ ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ದಿನಾಂಕವನ್ನೂ ಬದಲಿಸಿ ಅಕ್ಟೋಬರ್ 10ರಂದು ನಡೆಸುವಂತೆ ಮನವಿ ಮಾಡಲಾಗಿತ್ತು. ಪಾಕ್ ಪಡೆ ಶ್ರೀಲಂಕಾ ಹಾಗೂ ಭಾರತವನ್ನು ಒಂದೇ ದಿನದ ಅಂತರದಲ್ಲಿ ಎದುರಿಸಬೇಕಾದ ಕಾರಣ ದಿನಾಂಕ ಬದಲಾವಣೆಗೆ ಮನವಿ ಮಾಡಲಾಗಿತ್ತು. ಇದೀಗ ಪಾಕ್-ಇಂಗ್ಲೆಂಡ್ ಪಂದ್ಯಕ್ಕೆ ಭದ್ರತಾ ಸಮಸ್ಯೆ ಎದುರಾಗಿದೆ. ಸದ್ಯ ಎಲ್ಲ ಬದಲಾವಣೆಗಳಿಗೆ ಐಸಿಸಿ ಸಮ್ಮತಿ ಸೂಚಿಸುವುದು ಬಹುತೇಕ ಖಚಿತವಾಗಿದೆ. ಸದ್ಯದಲ್ಲೇ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಆಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 15ರ ಬದಲು ಅಕ್ಟೋಬರ್ 14ರಂದು ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ಸಮ್ಮತಿ ಸೂಚಿಸಿದೆ ಎಂದು ವರದಿಯೊಂದು ತಿಳಿಸಿದೆ. ಹಾಗಾಗಿ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಕುರಿತ ಗೊಂದಲ ಕೊನೆಗೂ ಬಗೆಹರಿದಂತಾಗಿದೆ. 2013 ರಲ್ಲಿ ಕೊನೆಯ ಪಂದ್ಯವನ್ನು ಆಡಿದ ನಂತರ ಭಾರತವು 10 ವರ್ಷಗಳ ನಂತರ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯವನ್ನು ಆಡಲಿದೆ. ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತವೆ, ಆದ್ದರಿಂದ ಅಭಿಮಾನಿಗಳು ಈ ಎರಡು ತಂಡಗಳ ಆಟವನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ, ಉಭಯ ತಂಡಗಳ ನಡುವಿನ ವಿಶ್ವಕಪ್ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.