Site icon Vistara News

ICC World Cup 2023: ಭಾರತಕ್ಕೆ ಹೊರಟ ಪಾಕ್​ ತಂಡ; ಖಾಲಿ ಸ್ಟೇಡಿಯಂನಲ್ಲಿ ಪಂದ್ಯ

pakistan team

ಲಾಹೋರ್​: ಇದೇ ಮೊದಲ ಬಾರಿಗೆ ಸಂಪೂರ್ಣ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿ(ICC World Cup 2023) ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈಗಾಗಕಲೇ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಸೇರಿ ಕೆಲ ದೇಶಗಳು ಭಾರತಕ್ಕೆ ಬಂದು ತಲುಪಿದೆ. ಭಾರತದ(IND vs PAK) ಬದ್ಧ ಎದುರಾಳಿ ಪಾಕಿಸ್ತಾನ ತಂಡ ಬುಧವಾರ ರಾತ್ರಿ ಹೈದರಾಬಾದ್​ಗೆ ಬಂದಿಳಿಯಲಿದೆ. ಸೆಪ್ಟೆಂಬರ್ 29 ರಂದು ಕಿವೀಸ್​ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಕಳವಳ ವ್ಯಕ್ತಪಡಿಸಿದ್ದ ಪಾಕ್​

​ಪಾಕಿಸ್ತಾನ ತಂಡ ಕೆಲವು ದಿನಗಳ ಹಿಂದೆಯೇ ಭಾರತಕ್ಕೆ ಬರಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದ ಪ್ರಯಾಣ ಅಸಾಧ್ಯವಾಗಿತ್ತು. ಇದೇ ವಿಚಾರವಾಗಿ ಪಾಕ್​ ಕ್ರಿಕೆಟ್​ ಮಂಡಳಿ ವಿಶ್ವಕಪ್​ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಸೋಮವಾರ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡುವ ವ್ಯವಸ್ಥೆ ಮಾಡಿತ್ತು.

ಭದ್ರತಾ ಸಮಸ್ಯೆ

ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್​ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್​ ವಿರುದ್ಧ ಆಡಲಿದೆ. ಆದರೆ ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ಈಗಾಗಲೇ ತಿಳಿಸಿದೆ. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿದ್ದರು .ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ Cricket Record : T20ಯಲ್ಲಿ 314 ರನ್‌, 9 ಬಾಲ್‌ನಲ್ಲಿ ಫಿಫ್ಟಿ, 34 ಬಾಲ್‌ಗಳಲ್ಲಿ ಸೆಂಚುರಿ! ಯಾರ ದಾಖಲೆ ಇದು?

ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್​ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್​ ಯುವ ವೇಗಿ ನಸೀಮ್​ ಶಾ ಅವರು ಏಷ್ಯಾಕಪ್​ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.

ಭಾರತ-ಪಾಕ್​ ಮುಖಾಮುಖಿ

ಈ ಮಹತ್ವದ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಮತ್ತು ಫೈನಲ್​ ಪಂದ್ಯಗಳೆರಡು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಭಾರತ ಮತ್ತು ಪಾಕ್​ ನಡುವಣ ಹೈವೋಲ್ಟೇಜ್​ ಕದನ ಅಕ್ಟೋಬರ್​ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ.

ಪಾಕಿಸ್ತಾನ ತಂಡ

ಬಾಬರ್‌ ಅಜಂ (ನಾಯಕ), ಶದಾಬ್‌ ಖಾನ್‌ (ಉಪ ನಾಯಕ), ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಅಬ್ದುಲ್ಲಾ ಶಫೀಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌, ಅಘಾ ಸಲ್ಮಾನ್‌, ಸೌದ್‌ ಶಕೀಲ್‌, ಮೊಹಮ್ಮದ್‌ ನವಾಜ್‌, ಶಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಹಸನ್‌ ಅಲಿ, ಉಸಾಮ ಮಿರ್‌, ಮೊಹಮ್ಮದ್‌ ವಸೀಂ. ಮೀಸಲು ಆಟಗಾರು: ಅಬ್ರಾರ್‌ ಅಹ್ಮದ್‌, ಜಮಾನ್‌ ಖಾನ್‌ ಹಾಗೂ ಮೊಹಮ್ಮದ್‌ ಹ್ಯಾರಿಸ್‌.

Exit mobile version