ವೆಲ್ಲಿಂಗ್ಟನ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವ ಕಪ್ ಟೂರ್ನಿಗೆ(ICC World Cup 2023) ಎಲ್ಲ ತಂಡಗಳು ಸಿದ್ಧತೆ ನಡೆಸಲು ಆರಂಭಿಸಿದೆ. ಈ ಕೂಟ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಇದೇ ವಾರದಲ್ಲಿ ವೇಳಾಪಟ್ಟಿಯೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಕಳೆದ ಬಾರಿಯ ಫೈನಲಿಸ್ಟ್ ನ್ಯೂಜಿಲ್ಯಾಂಡ್ ತಂಡಕ್ಕೆ ಗಾಯದ(injury) ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಐಪಿಎಲ್ನ ಉದ್ಘಾಟನ ಪಂದ್ಯದಲ್ಲೇ ಗಾಯಕ್ಕೆ ತುತ್ತಾಗಿ ಕಾಲಿನ ಶಸ್ತ್ರಚಿಕಿತ್ಸಗೆ ಒಳಗಾಗಿರುವ ತಂಡದ ನಾಯಕ ಕೇನ್ ವಿಲಿಯಮ್ಸನ್(Kane Williamson) ಅವರು ವಿಶ್ವ ಕಪ್ನಿಂದ ಹೊರಬಿದ್ದಿದ್ದಾರೆ. ಈ ನೋವನ್ನು ಅರಗಿಸಿಕೊಳ್ಳುವ ಮುನ್ನವೇ ತಂಡಕ್ಕೆ ಮತ್ತೊಂದು ಆಘಾತ ಎದುದರಾಗಿದೆ. ತಂಡದ ಸ್ಟಾರ್ ಆಟಗಾರನಾಗಿದ್ದ ಮೈಕೆಲ್ ಬ್ರೇಸ್‌ವೆಲ್(Michael Bracewell) ಅವರು ಕೂಡ ಗಾಯಗೊಂಡು ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಆಲ್ರೌಂಡರ್ ಆಗಿದ್ದ ಬ್ರೇಸೆವೆಲ್ ಅವರು ಕಳೆದ ಶುಕ್ರವಾರ ಇಂಗ್ಲಿಷ್ ಟಿ20 ಬ್ಲಾಸ್ಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ರಾಪಿಡ್ಸ್ ಪರ ಆಡುತ್ತಿದ್ದಾಗ ಗಾಯಕ್ಕೆ ತುತ್ತಾಗಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದಾಗ ಸ್ನಾಯುರಜ್ಜು ನೋವಿನಿಂದ ಬಳಲಿ ಪಂದ್ಯದ ನಡುವಿನಲ್ಲೇ ಮೈದಾನದಿಂದ ಹೊರನಡೆದರು. ಅವರ ಗಾಯದ ಸ್ವರೂಪ ಗಂಭಿರವಾದ ಪರಿಣಾಮ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಚೇತರಿಕೆಗೆ ಕನಿಷ್ಠ ಎಂಟು ತಿಂಗಳ ವಿಶ್ರಾಂತಿಯ ಅಗತ್ಯ ಇದೆ ಎನ್ನಲಾಗಿದೆ. ಹೀಗಾಗಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಿಂದ ಅವರು ಹೊರಗುಳಿಯುವುದು ಖಚಿತವಾಗಿದೆ. ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಪಕಟಿಸಿದೆ.
New Zealand have been hit by another serious injury with an all-rounder to miss @cricketworldcup 2023
— ICC (@ICC) June 14, 2023
More 👇https://t.co/oH1sH7cset
ಇದನ್ನೂ ಓದಿ ICC World Cup 2023: ಕೇರಳದಲ್ಲಿ ಮೊದಲ ಬಾರಿಗೆ ನಡೆಯಲಿದೆ ವಿಶ್ವ ಕಪ್ ಪಂದ್ಯ; ಎಷ್ಟು ಪಂದ್ಯಗಳಿಗೆ ಆತಿಥ್ಯ?
ಬ್ರೇಸ್ ವೆಲ್ ಅವರ ಗಾಯದ ಕುರಿತು ಮಾಹಿತಿ ನೀಡಿರುವ ತಂಡದ ಕೋಚ್ ಗ್ಯಾರಿ ಸ್ಟೆಡ್, “ಬ್ರೇಸ್‌ವೆಲ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ಕಹಿ ಸುದ್ದಿಯಾಗಿದೆ. ಯಾವುದೇ ಆಟಗಾರರು ಗಾಯಕ್ಕೆ ಒಳಗಾದಾಗ ರಾಷ್ಟ್ರೀಯ ತಂಡವು ಸಂಕಷ್ಟಕ್ಕೆ ಸಿಲುಕುತ್ತದೆ. ಅದರಲ್ಲೂ ಸ್ಟಾರ್ ಆಟಗಾರರು ಮಹತ್ವದ ಸರಣಿ ಇರುವ ವೇಳೆಯೇ ಗಾಯಗೊಂಡು ತಂಡದಿಂದ ಹೊರಗುಳಿಯುವುದು ಅತ್ಯಂತ ಬೇಸರದ ವಿಷಯವಾಗಿದೆ” ಎಂದು ಹೇಳುವ ಮೂಲಕ ಬ್ರೇಸ್ ವೆಲ್ ಅವರು ವಿಶ್ವ ಕಪ್ಗೆ ಅಲಭ್ಯರಾಗುವ ವಿಚಾರವನ್ನು ತಿಳಿಸಿದ್ದಾರೆ.