Site icon Vistara News

ICC World Cup 2023: ವಿಶ್ವಕಪ್‌ ಫೈಟ್‌ಗೆ ಪಾಕ್‌ ಸಜ್ಜು; ತಂಡದ ಬಲ-ದೌರ್ಬಲ್ಯಗಳೇನು? ಇಲ್ಲಿದೆ ವಿವರಣೆ

Pakistan Cricket Team

ICC World Cup 2023: Strength And Weakness of Pakistan Cricket Team

ಬೆಂಗಳೂರು: 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪುವಲ್ಲಿಯೂ ವಿಫಲ. 2021 ಹಾಗೂ 2022ರಲ್ಲಿ ನಡೆದ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಹಿನ್ನಡೆ. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಸೋಲು. 2023ರ ಏಷ್ಯಾಕಪ್‌ನಲ್ಲೂ ಫೈನಲ್‌ ತಲುಪುವಲ್ಲಿ ವಿಫಲ. ಅತ್ಯುತ್ತಮ ತಂಡವನ್ನೇ ಹೊಂದಿದ್ದರೂ ಪಾಕಿಸ್ತಾನ ಕ್ರಿಕೆಟ್‌ ತಂಡವು ಹೀಗೆ ಸಾಲು ಸಾಲು ವಿಶ್ವ ಕ್ರಿಕೆಟ್‌ ಟೂರ್ನಿಗಳಲ್ಲಿ ಸೋಲನುಭವಿಸಿದೆ. ಆದರೆ, ಈ ಸೋಲನ್ನು ಮರೆತು, ಗೆಲುವಿನ ಸಂಭ್ರಮ ಆಚರಿಸುವ ಮನೋಭಾವದೊಂದಿಗೆ ಪಾಕ್‌ ಕ್ರಿಕೆಟ್‌ ತಂಡವು ಭಾರತಕ್ಕೆ ಆಗಮಿಸಿದೆ. ಹಾಗಾದರೆ, 2023ರ ವಿಶ್ವಕಪ್‌ಗೆ ಪಾಕ್‌ ಕ್ರಿಕೆಟ್‌ ತಂಡ ಹೇಗೆ ಸಿದ್ಧವಾಗಿದೆ? ಅದರ ಬಲಾಬಲವೇನು ಎಂಬುದರ ಇಣುಕು ನೋಟ ಇಲ್ಲಿದೆ.

ಪಾಕಿಸ್ತಾನದ 15 ಸದಸ್ಯರ ತಂಡ

ಬಾಬರ್‌ ಅಜಂ (ನಾಯಕ), ಶದಾಬ್‌ ಖಾನ್‌ (ಉಪ ನಾಯಕ), ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಅಬ್ದುಲ್ಲಾ ಶಫೀಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌, ಅಘಾ ಸಲ್ಮಾನ್‌, ಸೌದ್‌ ಶಕೀಲ್‌, ಮೊಹಮ್ಮದ್‌ ನವಾಜ್‌, ಶಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಹಸನ್‌ ಅಲಿ, ಉಸಾಮ ಮಿರ್‌, ಮೊಹಮ್ಮದ್‌ ವಸೀಂ.

babar azam

ಬಾಬರ್‌ ಅಜಂ ಬಳಗದ ಸಾಮರ್ಥ್ಯವೇನು?

  1. ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವುದು ಪಾಕ್‌ ತಂಡದ ಸಾಮರ್ಥ್ಯ. ಬಾಬರ್‌ ಅಜಂ, ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಮೊಹಮ್ಮದ್‌ ರಿಜ್ವಾನ್‌, ಇಫ್ತಿಕಾರ್‌ ಅಹ್ಮದ್‌ ಅವರು ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇವರು ಯಾವುದೇ ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
  2. ಪಾಕಿಸ್ತಾನದ ವೇಗದ ಬೌಲಿಂಗ್‌ ಅಟ್ಯಾಕ್‌ಗೆ ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೇ ಒಂದು ಕ್ಷಣ ಯೋಚಿಸುತ್ತಾರೆ. ಶಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ಮೊಹಮ್ಮದ್‌ ವಸೀಂ ಪ್ರಮುಖ ಪೇಸರ್‌ಗಳಾಗಿದ್ದಾರೆ.
  3. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ನಲ್ಲೂ ಪಾಕಿಸ್ತಾನ ತಂಡವು ಬಲಿಷ್ಠವಾಗಿದೆ. ಜಗತ್ತಿನಲ್ಲೇ ಉತ್ತಮ ಫೀಲ್ಡರ್‌ಗಳಿರುವ ರಾಷ್ಟ್ರದಲ್ಲಿ ಪಾಕ್‌ 2ನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹಾಗಾಗಿ, ಪ್ರತಿ ಪಂದ್ಯದಲ್ಲಿ ಪಾಕ್‌ ತಂಡವು 20-30 ರನ್‌ ಉಳಿಸುವುದರಲ್ಲಿ ಎರಡು ಮಾತಿಲ್ಲ.
  4. ಬಾಬರ್‌ ಅಜಂ ಉತ್ತಮ ನಾಯಕತ್ವ ಹಾಗೂ ಅವರ ಅತ್ಯದ್ಭುತ ಬ್ಯಾಟಿಂಗ್‌ ಕೂಡ ಪಾಕ್‌ಗೆ ಸಕಾರಾತ್ಮಕವಾಗಿದೆ. ಮಹತ್ವದ ಟೂರ್ನಿಗಳಲ್ಲಿ ಇದು ಸಾಬೀತಾಗಿದೆ.

ಪಾಕ್‌ ತಂಡದ ದೌರ್ಬಲ್ಯಗಳೇನು?

  1. ಸ್ಪಿನ್‌ ವಿಭಾಗವೇ ಪಾಕ್‌ ಕ್ರಿಕೆಟ್‌ ತಂಡದ ದೊಡ್ಡ ತಲೆನೋವಾಗಿದೆ. ಉಪ ನಾಯಕ ಶದಾಬ್‌ ಖಾನ್‌ ಅವರು ಅಲ್‌ರೌಂಡರ್‌ ಆಗದ್ದರೂ ಏಷ್ಯಾ ಕಪ್‌ ಟೂರ್ನಿಯಲ್ಲ ಅವರ ಆಟ ನಡೆದಿರಲಿಲ್ಲ. ಸ್ಪಿನ್ನರ್‌ಗಳಿಗೆ ಭಾರತದ ಪಿಚ್‌ಗಳು ಹೇಳಿ ಮಾಡಿಸಿದಂತಿರುವ ಕಾರಣ ಸ್ಪಿನ್‌ ವಿಭಾಗವು ಪಾಕ್‌ಗೆ ತಲೆನೋವಾಗಿದೆ.
  2. ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿರುವ ನಸೀಮ್‌ ಶಾ ಅನುಪಸ್ಥಿತಿಯೂ ಪಾಕ್‌ಗೆ ಕಾಡಲಿದೆ. ಇವರ ಜಾಗಕ್ಕೆ ಅಷ್ಟೇನೂ ಫಾರ್ಮ್‌ನಲ್ಲಿರುವ ಹಸನ್‌ ಅಲಿಗೆ ಪಾಕ್‌ ಮಣೆ ಹಾಕಿದೆ. ಆದರೂ, ವೇಗಿ ನಸೀಮ್‌ ಶಾ ಅಲಭ್ಯತೆಯು ಪಾಕಿಸ್ತಾನಕ್ಕೆ ಕಾಡಲಿದೆ.
  3. ಇತ್ತೀಚಿನ ಸರಣಿಗಳಲ್ಲಿ ಮೊಹಮ್ಮದ್‌ ರಿಜ್ವಾನ್‌ ಹಾಗೂ ಸಲ್ಮಾನ್‌ ಅಲಿ ಅಘಾ ಅವರಿಂದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಕಾಣದಿರುವುದು ಬಾಬರ್‌ ಅಜಂ ಅವರಿಗೆ ನುಂಗಲಾರದ ತುತ್ತಾಗಿದೆ. ಪ್ರಮುಖ ಪಂದ್ಯಗಳಲ್ಲಿಯೇ ಇವರು ಕೈಕೊಡುವುದು ಕೂಡ ಹೆಚ್ಚು ರೂಢಿಯಾಗಿದೆ.
  4. ಅಗ್ರ ಕ್ರಮಾಂಕದ ಸದೃಢ ಬ್ಯಾಟಿಂಗ್‌ ಪಾಕಿಸ್ತಾನದ ಬಲವಾದರೆ, ಇದೇ ದೌರ್ಬಲ್ಯವೂ ಆಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಔಟಾದರೆ ಸಾಕು, ಪಾಕ್‌ ಇನಿಂಗ್ಸ್‌ ಮುಗಿದಂತೆಯೇ ಎಂಬಂತಾಗಿದೆ. ಅದರಲ್ಲೂ, ದೀರ್ಘ ಸಮಯದ ನಂತರ ಭಾರತದ ಪಿಚ್‌ಗಳಲ್ಲಿ ಆಡುತ್ತಿದ್ದು, ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ICC World Cup 2023 : ವಿಶ್ವ ಕಪ್​ಗೆ ಆಡುವ ಭಾರತ ತಂಡದ ಬಲಾಬಲವೇನು? ಗೆಲುವಿನ ಅವಕಾಶ ಎಷ್ಟಿದೆ?

babar azam

ಪಾಕ್‌ಗೆ ಇರುವ ಒಳ್ಳೆಯ ಅವಕಾಶಗಳೇನು?

ಪಾಕಿಸ್ತಾನ ತಂಡವು ಕಳೆದ 12 ತಿಂಗಳಿಂದ ಸತತವಾಗಿ ಉತ್ತಮ ಪ್ರದರ್ಶನ ತೋರಿದೆ. ವಿಶ್ವ ಏಕದಿನ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಪಾಕ್‌ ತಂಡವು ಏಕದಿನ ಕ್ರಿಕೆಟ್‌ನ ಅತ್ಯುತ್ತಮ ತಂಡ ಎನಿಸಿದೆ. ಬಾಬರ್‌ ಅಜಂ ನಾಯಕತ್ವವೂ ಉತ್ತಮವಾಗಿದೆ. ಕಳೆದ 27 ವರ್ಷಗಳಿಂದ ಪಾಕಿಸ್ತಾನ ಏಕದಿನ ವಿಶ್ವಕಪ್‌ ಗೆದ್ದಿಲ್ಲ. ಬಲಿಷ್ಠ ತಂಡ, ಉತ್ತಮ ನಾಯಕತ್ವ, ಏಷ್ಯಾದಲ್ಲಿಯೇ ಪಂದ್ಯ ಆಯೋಜನೆಗೊಂಡಿರುವ ಕಾರಣ ವಿಶ್ವಕಪ್‌ ಗೆಲ್ಲಲು ಪಾಕ್‌ಗೆ ಒಳ್ಳೆಯ ಅವಕಾಶಗಳಿವೆ.

babar azam

ಹೀಗಿದೆ ಪಾಕ್‌ ತಂಡದ ವೇಳಾಪಟ್ಟಿ

ಅಕ್ಟೋಬರ್‌ 5ರಿಂದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಪಾಕಿಸ್ತಾನವು ಮೊದಲ ಪಂದ್ಯವನ್ನು ಅಕ್ಟೋಬರ್‌ 6ರಂದು ನೆದರ್ಲೆಂಡ್ಸ್‌ ವಿರುದ್ಧ ಆಡಲಿದೆ. ಅ.10ರಂದು ಶ್ರೀಲಂಕಾ, ಅ.14ರಂದು ಭಾರತ, ಅ.20 ಆಸ್ಟ್ರೇಲಿಯಾ, ಅ.23 ಅಫಘಾನಿಸ್ತಾನ, ಅ.26 ದಕ್ಷಿಣ ಆಫ್ರಿಕಾ, ಅ.31 ಬಾಂಗ್ಲಾದೇಶ, ನವೆಂಬರ್‌ 4 ನ್ಯೂಜಿಲ್ಯಾಂಡ್‌ ಹಾಗೂ ನವೆಂಬರ್‌ 11ರಂದು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಅದರಲ್ಲೂ, ಅಹ್ಮದಾಬಾದ್‌ನಲ್ಲಿ ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.

ವಿಶ್ವಕಪ್‌ ಕುರಿತ ಇನ್ನಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version