ನವದೆಹಲಿ: ಬುಧವಾರದ ವಿಶ್ವಕಪ್(ICC World Cup 2023) ಪಂದ್ಯದಲ್ಲಿ ರನ್ ಮಳೆಯನ್ನೇ ಸುರಿಸಿದ ಆಸ್ಟ್ರೇಲಿಯಾ(Australia vs Netherlands) ತಂಡ ನೆದರ್ಲೆಂಡ್ಸ್ ವಿರುದ್ಧ ಬೃಹತ್ 309 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ರೇಸ್ಗೆ ಧುಮುಕಿದೆ. ಆರಂಭಿಕ ಪಂದ್ಯಗಳಲ್ಲಿ ಸತತ ಎರಡು ಸೋಲು ಕಂಡಿದ್ದ ಆಸೀಸ್ ತಂಡವನ್ನು ಯಾವತ್ತಿಗೂ ಲಘುವಾಗಿ ಕಾಣಲು ಸಾಧ್ಯವಿಲ್ಲ. ವಿಶ್ವಕಪ್ನಲ್ಲಿ ಆಸೀಸ್ ತಂಡದ್ದು ಡಿಫರೆಂಟ್ ಗೇಮ್. ಎಂತದ್ದೇ ಪರಿಸ್ಥಿತಿಯಿಂದ ಪುಟಿದೆದ್ದು ಕಪ್ ಎತ್ತಿ ಹಿಡಿಯುವ ತಾಕತ್ತು ಈ ತಂಡಕ್ಕಿದೆ. ಸದ್ಯ 5 ಪಂದ್ಯಗಳಿಂದ ಮೂರು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥನದಲ್ಲಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್ ವಾರ್ನರ್(104) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(106) ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 399 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್ 21 ಓವರ್ಗಳಲ್ಲಿ 90 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್ಗಳ ಗೆಲುವು ಸಾಧಿಸಿತು.
ಇದನ್ನೂ ಓದಿ Odi Cricket History: ಏಕದಿನ ಕ್ರಿಕೆಟ್ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ
ಸದ್ಯ ಆಸ್ಟ್ರೇಲಿಯಾ 5 ಪಂದ್ಯಗಳನ್ನು ಆಡಿ ಮೂರರಲ್ಲಿ ಗೆಲುವು ಸಾಧಿಸಿ 6 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. +1.142 ರನ್ ರೇಟ್ ಹೊಂದಿದೆ. ಆಸ್ಟ್ರೇಲಿಯಾಕ್ಕೆ ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಇಲ್ಲಿ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. 2ರಲ್ಲಿ ಸೋತರು ಸೆಮಿ ಟಿಕೆಟ್ ಮಿಸ್ ಆಗುವ ಸಾಧ್ಯತೆ ಅಧಿಕವಾಗಿದೆ. ಸೆಮಿಫೈನಲ್ ಪ್ರವೇಶ ಪಡೆಯಲು ಕನಿಷ್ಠ 6 ಗೆಲುವು ಅಗತ್ಯವಾಗಿದೆ.
ಭಾರತಕ್ಕೆ ಅಗ್ರಸ್ಥಾನ
ಆತಿಥೇಯ ಭಾರತ ತಂಡ ಆಡಿದ ಎಲ್ಲ 5 ಪಂದ್ಯಗಳನ್ನು ಗೆದ್ದು 10 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದೆ. 5ರಲ್ಲಿ ನಾಲ್ಕು ಪಂದ್ಯ ಗೆದ್ದ ನ್ಯೂಜಿಲ್ಯಾಂಡ್ 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. 5ರಲ್ಲಿ ನಾಲ್ಕು ಪಂದ್ಯ ಗೆದ್ದು ಉತ್ತಮ ರನ್ ರೇಟ್ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ +2.370 ರನ್ ರೇಟ್ ಹೊಂದಿದೆ. ಭಾರತ ಇನ್ನೊಂದು ಪಂದ್ಯ ಗೆದ್ದರೂ ಸೆಮಿಫೈನಲ್ಗೆ ಅಧಿಕೃತ ಎಂಟ್ರಿ ಕೊಡಲಿದೆ. ಭಾರತದ ಬದ್ಧ ಎದುರಾಳಿ ಹ್ಯಾಟ್ರಿಕ್ ಸೋಲು ಕಂಡ ಪಾಕಿಸ್ತಾನ 4 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ.
ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 5 | 5 | 0 | 10 | 1.353 |
ದಕ್ಷಿಣ ಆಫ್ರಿಕಾ | 5 | 4 | 1 | 8 | +2.370 |
ನ್ಯೂಜಿಲ್ಯಾಂಡ್ | 5 | 4 | 1 | 6 | +1.481 |
ಆಸ್ಟ್ರೇಲಿಯಾ | 5 | 3 | 2 | 6 | +1.142 |
ಪಾಕಿಸ್ತಾನ | 5 | 2 | 3 | 4 | -0.400 |
ಅಫಘಾನಿಸ್ತಾನ | 5 | 1 | 3 | 4 | -0.969 |
ಶ್ರೀಲಂಕಾ | 4 | 1 | 3 | 2 | -1.048 |
ಇಂಗ್ಲೆಂಡ್ | 4 | 1 | 3 | 2 | -1.248 |
ಬಾಂಗ್ಲಾದೇಶ | 5 | 1 | 3 | 2 | -1.253 |
ನೆದರ್ಲೆಂಡ್ಸ್ | 5 | 1 | 3 | 2 | -1.902 |