ಬೆಂಗಳೂರು: ಅಕ್ಟೋಬರ್ 5 ರಿಂದ ಆರಂಭವಾದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(ICC World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಭಾನುವಾರ) ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೂಲಕ ಲೀಗ್ ಪಂದ್ಯಗಳಿಗೆ ತೆರೆ ಬೀಳಲಿದೆ. ಬಳಿಕ ಸೆಮಿ ಮತ್ತು ಫೈನಲ್ ಸುತ್ತು ಆರಂಭಗೊಳ್ಳಲಿದೆ.
ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಇಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಪ್ರವೇಶ ಗಿಟ್ಟಿಸಿಕೊಂಡಿತು. ಭಾರತ ಸೆಮಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿದರೆ, ಮತ್ತೊಂದು ಸೆಮಿ ಕದನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಇಂದು ಭಾರತಕ್ಕೆ ನೆದರ್ಲೆಂಡ್ ಎದುರಾಳಿ
ಇಂದು ನಡೆಯುವ ವಿಶ್ವಕಪ್ನ 45ನೇ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನೆದರ್ಲೆಂಡ್ಸ್(IND vs NED) ಕಣಕ್ಕಿಳಿಯಲಿದೆ. ಅಜೇಯ ಗೆಲುವಿನ ಓಟ ಕಾಯ್ದುಕೊಂಡಿರುವ ರೋಹಿತ್ ಶರ್ಮ ಪಡೆಯೇ ನೆಚ್ಚಿನ ತಂಡವಾಗಿದೆ. ಇತ್ತಂಡಗಳ ಈ ಹೋರಾಟಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಣಿಯಾಗಿದೆ.
ಹವಾಮಾನ ವರದಿ
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗಿಲ್ಲ. ಸದ್ಯ ಭಾನುವಾರವೂ ಮಳೆ ಬರುವಂತೆ ಕಾಣುತ್ತಿಲ್ಲ. ಆದರೂ ಹವಾಮಾನ ಇಲಾಖೆ ಶೇ.3 ಪ್ರತಿಶತದಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ತೇವಾಂಶವು ಶೇಕಡಾ 45 ರಷ್ಟಿದ್ದರೆ, ಮೋಡ ಶೇಕಡಾ 18 ರಷ್ಟಿರುತ್ತದೆ. ಇದಲ್ಲದೆ, ತಾಪಮಾನವು 16 ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ಮಳೆ ಬಂದರೂ ಭಾರತಕ್ಕೆ ಯಾವುದೇ ನಷ್ಟ ಸಂಭವಿಸುದಿಲ್ಲ. ಕಾರಣ ಭಾರತ ಸೆಮಿಫೈನಲ್ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಡಚ್ಚರ ವಿರುದ್ಧದ ಪಂದ್ಯ ಕೇವಲ ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಇಲ್ಲಿ 300 ಪ್ಲಸ್ ರನ್ಗೆ ಯಾವುದೇ ಕೊರತೆಯಾಗದು. ಪಿಚ್ 22 ಯಾರ್ಡ್ಗಳಷ್ಟು ಉದ್ದವಾಗಿದೆ ಮತ್ತು ಬೌಂಡರಿ ಲೈನ್ ಕೂಡ ಚಿಕ್ಕದಾಗಿದೆ. ಹೀಗಾಗಿ ಬ್ಯಾಟರ್‌ಗಳಿಗೆ ಇಲ್ಲಿ ಉತ್ತಮ ಸ್ಕೋರ್ ಮಾಡಲು ಸಹಕಾರಿಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಇದು ತವರಿನ ಪಂದ್ಯ. ಇದೇ ಕ್ರೀಡಾಂಗಣದಲ್ಲಿ ಅವರು ಆಡಿ ಬೆಳದದ್ದು. ಕೊಹ್ಲಿಗೂ ಈ ಪಿಚ್ನಲ್ಲಿ ಆಡಿದ ಅಪಾರ ಅನುಭವವಿದೆ. ಏಕೆಂದರೆ ಐಪಿಎಲ್ನಲ್ಲಿ ಅವರು ಆರ್ಸಿಬಿ ಪರ ಆಡುತ್ತಿದ್ದಾರೆ. ಅಲ್ಲದೆ ಆರ್ಸಿಬಿ ಬೌಲರ್ ಸಿರಾಜ್ಗೂ ಈ ಪಿಚ್ ಬೌಲಿಂಗ್ನಲ್ಲಿ ನೆರವು ನೀಡಬಹುದು.
ಇದನ್ನೂ ಓದಿ Team India : ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಿಕೊಂಡ ಭಾರತ ತಂಡದ ಆಟಗಾರರು
ಜೋಶ್ ತುಂಬಲಿದ್ದಾರೆ ಕೊಹ್ಲಿ ಅಭಿಮಾನಿಗಳು
ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಸಹಜವಾಗಿಯೇ ಪಂದ್ಯಕ್ಕೆ ಅವರ ಅಭಿಮಾನಿಗಳು ಜೋಶ್ ತುಂಬಲಿದ್ದಾರೆ. ಈ ಪಂದ್ಯದ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮ(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್/ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಕುಲ್ದೀಪ್ ಯಾದವ್, ಆರ್. ಅಶ್ವಿನ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ನೆದರ್ಲೆಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.