ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ(ICC World Cup 2023) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಯಾವ ತಂಡ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ್ದಾರೆ. ಈ ಸಾಲಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಹಾರ್ಡ್ ಹಿಟ್ಟರ್ ಎಬಿ ಡಿ ವಿಲಿಯರ್ಸ್(Ab De Villiers) ಕೂಡ ಸೇರ್ಪಡೆಗೊಂಡಿದ್ದಾರೆ. ವಿಶ್ವಕಪ್ನಲ್ಲಿ ಸೆಮಿಫೈನಲ್(icc world cup semi final 2023) ತಲುಪುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭವಾಗಿ ನವೆಂಬರ್ 19ರ ತನಕ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಕೂಟದಲ್ಲಿ ಎಲ್ಲ ತಂಡಗಳು ಮುಖಾಮುಖಿಯಾಗಲಿವೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ 10 ಅಭ್ಯಾಸ ಪಂದ್ಯಗಳು ನಡೆಯಲಿದೆ.
ಪಾಕಿಸ್ತಾನಕ್ಕಿಲ್ಲ ಅವಕಾಶ
ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಡಿ ವಿಲಿಯರ್ಸ್, ಈ ಬಾರಿಯ ವಿಶ್ವಕಪ್ನಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪುವ ವಿಶ್ವಾಸವಿದೆ. ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದರೂ ನಾಕೌಟ್ ತಲುಪುವ ಅವಕಾಶವಿದೆ ಎಂದು ಹೇಳಿದ್ದಾರೆ.
ಭಾರತವೇ ಚಾಂಪಿಯನ್
ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿರುವ ಎಬಿಡಿ, 2011ರಲ್ಲಿ ನಡೆದ ವಿಶ್ವಕಪ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಭಾರತ ಎರಡನೇ ವಿಶ್ವಕಪ್ ಎತ್ತಿ ಹಿಡಿದು ಸಂಭ್ರಮಿಸಿತ್ತು. ಈ ಬಾರಿಯೂ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ತಂಡ ನಿಸ್ಸಂದೇಹವಾಗಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ತವರಿನ ಲಾಭ ಹೆಚ್ಚಾಗಿ ದೊರೆಯಲಿದೆ. ಜತೆಗೆ ತಂಡವೂ ಹೆಚ್ಚು ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಅವರಂತಹ ವಿಶ್ವ ದರ್ಜೆಯ ಆಟಗಾರರು ಇರುವುದರಿಂದ ಕಪ್ ಗೆಲ್ಲುವ ಅವಕಾಶವಿದೆ ಎಂದರು.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ಗೆ ತಂಡಗಳ ಪ್ರಕಟಕ್ಕೆ ದಿನಾಂಕ ನಿಗದಿ; ಭಾರತಕ್ಕೆ ಗಾಯದ ಚಿಂತೆ
ಫೈನಲ್ನಲ್ಲಿ ಭಾರತಕ್ಕೆ ಈ ತಂಡ ಎದುರಾಳಿ
ವಿಶ್ವ ಕಪ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಭಾರತ ತಂಡ ಸೆಣಸಾಟ ನಡೆಸುವುದನ್ನು ನೋಡಲು ಹೆಚ್ಚು ಇಷ್ಟಪಡುತ್ತೇನೆ. ಈ ಎರಡು ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರೆ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಪಂದ್ಯ ನೋಡುವ ಅವಕಾಶ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಆಫ್ರಿಕಾ ತಂಡಕ್ಕೆ ಫೈನಲ್ ಹಂತ ತಲುಪುವುದು ಅಷ್ಟು ಸುಲಭವಲ್ಲ. ಏಕೆಂದರೆ ಇಲ್ಲಿ ಸಮರ್ಥ ಆಟಗಾರರ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲ ಸವಾಲನ್ನು ಮೆಟ್ಟಿನಿಂತು ಫೈನಲ್ ತಲುಪಿದರೆ ನನ್ನಷ್ಟು ಖುಷಿ ಪಡುವ ವ್ಯಕ್ತಿ ಬೇರೊಬ್ಬರಿಲ್ಲ ಎಂದರು.
10 ತಂಡಗಳ ಸೆಣಸಾಟ
ವಿಶ್ವ ಕಪ್ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.