ಲಂಡನ್: ಇಂಗ್ಲೆಂಡ್ ತಂಡ ಚೊಚ್ಚಲ ಬಾರಿ ಏಕದಿನ ವಿಶ್ವಕಪ್(ICC World Cup) ಗೆಲ್ಲುವಲ್ಲಿ ಬೆನ್ ಸ್ಟೋಕ್ಸ್(Ben Stokes) ಮಹತ್ವದ ಪಾತ್ರವಹಿಸಿದ್ದರು. ನಂಬುಗೆಯ ಬ್ಯಾಟರ್ಗಳಲ್ಲೇ ಕೈಕೊಟ್ಟು ಸೋಲುವ ಹಂತ ಎದುರಾದಾಗ, ಟೊಂಕ ಕಟ್ಟಿ ನಿಂತು ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಆದರೆ ಈ ವಿಶ್ವಕಪ್ ಬಳಿಕ ಸ್ಟೋಕ್ಸ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ(World Cup 2023 in India) ಮತ್ತೆ ತಂಡದ ಪರ ಆಡುವಂತೆ ಸ್ಟೋಕ್ಸ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(England and Wales Cricket Board) ಕಳಕಳಿಯ ಮನವಿಯೊಂದನ್ನು ಮಾಡಿದೆ.
ಅತಿಯಾದ ಕ್ರಿಕೆಟ್…
ಅತಿಯಾದ ಕ್ರಿಕೆಟ್ ಒತ್ತಡದಿಂದ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯಲು ನಿರ್ಧರಿಸಿದ್ದರು. 2011 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕದಿನ ಕ್ರಿಕೆಟ್ಗೆ ಪಾರ್ದಾಪಣೆ ಮಾಡಿದ ಸ್ಟೋಕ್ಸ್ ಇದುವರೆಗೆ 104 ಪಂದ್ಯವನ್ನು ಆಡಿದ್ದು, 2,919 ರನ್ಗಳನ್ನು ಗಳಿಸಿ 3 ಶತಕದೊಂದಿಗೆ, 21 ಅರ್ಧ ಶತಕವನ್ನು ಸಿಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2019ರ ವಿಶ್ವಕಪ್ನ ಮಹತ್ತರ ಪಂದ್ಯದಲ್ಲಿ ಔಟಾಗದೆ 84 ರನ್ ಗಳಿಸಿದ್ದು, ಸ್ಟೋಕ್ಸ್ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಆಲ್ ರೌಂಡರ್ ಆಗಿರುವ ಸ್ಟೋಕ್ಸ್ ಬೌಲಿಂಗ್ನಲ್ಲಿ 74 ವಿಕೆಟ್ ಗಳನ್ನು ಪಡೆದಿದ್ದಾರೆ.
ನಿವೃತ್ತಿ ವಾಪಸ್ ಪಡೆಯುವರೇ ಸ್ಟೋಕ್ಸ್
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ವೇಳೆ ತಂಡದ ಕೋಚ್ ಮ್ಯಾಥ್ಯೂ ಮಾಟ್ ಅವರು ಏಕದಿನ ವಿಶ್ವಕಪ್ ಟ್ರೋಫಿ ತಮ್ಮಲ್ಲೇ ಉಳಿಸಿಕೊಳ್ಳಬೇಕಾದರೆ ಬೆನ್ ಸ್ಟೋಕ್ಸ್(Ben Stokes) ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದಿದ್ದರು. ಇದೀಗ ಇದೇ ಮನವಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೂ ಮಾಡಿದೆ. ತಮ್ಮ ಮೇಲೆ ನಂಬಿಕೆ ಇರಿಸಿ ಇಷ್ಟೆಲ್ಲ ಮನವಿ ಮಾಡುತ್ತಿರುವಾಗ ಸ್ಟೋಕ್ಸ್ ಅವರು ತಮ್ಮ ನಿರ್ಧಾರವನ್ನು ಬದಲಿಸಿದರು ಅಚ್ಚರಿ ಇಲ್ಲ. ಏಕೆಂದರೆ ಹಲವು ಕ್ರಿಕೆಟಿಗರು ನಿವೃತ್ತಿ ಘೋಷಿಸಿ ಮತ್ತೆ ಕ್ರಿಕೆಟ್ಗೆ ಮರಳಿದ ಹಲವು ದೃಷ್ಟಾಂತಗಳು ಕಣ್ಣ ಮುಂದಿವೆ.
ಇದನ್ನೂ ಓದಿ ICC World Cup: ರಾಹುಲ್ ಬಂದರೆ ಈತನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನವಿಲ್ಲ
ಆ್ಯಶಸ್ ಸರಣಿಯಲ್ಲಿ ಸುಳಿವು ನೀಡಿದ್ದ ಸ್ಟೋಕ್ಸ್
ಆ್ಯಶಸ್ ಸರಣಿಯ ವೇಳೆ ಸ್ಟೋಕ್ಸ್ ಅವರು ಒಂದು ಹೇಳಿಕೆಯನ್ನು ನೀಡಿದ್ದರು. ‘ನಾನು ವಿಶ್ರಾಂತಿ ಪಡೆದು ದೂರದ ಊರಿಗೆ ಪ್ರವಾಸ ಕೈಗೊಳ್ಳಲಿದ್ದೇನೆ. ಈ ಪ್ರವಾಸದಲ್ಲಿ ಚಿಂತನೆಯೊಂದನ್ನು ಮಾಡಲಿದ್ದೇನೆ’ ಎಂದು ಹೇಳಿದ್ದರು. ಅವರ ಈ ಹೇಳಿಯನ್ನು ಗಮನಿಸುವಾಗ ಅವರು ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯೂ ದಟ್ಟವಾಗಿದೆ. ಆದರೆ ಎಲ್ಲಿಯೂ ಸ್ಟೋಕ್ಸ್ ಈ ಅಧಿಕೃತ ಹೇಳಿಕೆ ನೀಡಿಲ್ಲ.
ಉದ್ಘಾಟನ ಪಂದ್ಯದಲ್ಲಿ ಕಿವೀಸ್ ಎದುರಾಳಿ
ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭಗೊಂಡು ನವೆಂಬರ್ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ.