ಲಂಡನ್: ಇಂಗ್ಲೆಂಡ್ ತಂಡದ ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್(Ben Stokes) ಅವರು ತಮ್ಮ ಏಕದಿನ ಕ್ರಿಕೆಟ್ ನಿವೃತ್ತಿಯನ್ನು ಹಿಂಪಡೆಯಲು ನಿರ್ಧರಿಸಿದಂತೆ ತೋರುತ್ತಿದ್ದು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ(ICC World Cup 2023) ಪಾಲ್ಗೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ಸ್ಟೋಕ್ಸ್ ಅವರು ಆ್ಯಶಸ್ ಸರಣಿಯ ಸುದ್ದಿಗೋಷ್ಠಿಯಲ್ಲಿ ಹೇಳಿದ ಒಂದು ಮಾತು ಅವರ ಏಕದಿನ ಕ್ರಿಕೆಟ್ ಕಮ್ಬ್ಯಾಕ್ ಬಗ್ಗೆ ಸುಳಿವು ನೀಡಿದೆ.
ಆ್ಯಶಸ್ ಸರಣಿಯ ಬಳಿಕ ನಾನು ವಿಶ್ರಾಂತಿ ಪಡೆದು ದೂರದ ಊರಿಗೆ ಪ್ರವಾಸ ಕೈಗೊಳ್ಳಲಿದ್ದೇನೆ. ಈ ಪ್ರವಾಸದಲ್ಲಿ ಚಿಂತನೆಯೊಂದನ್ನು ಮಾಡಲಿದ್ದೇನೆ ಎಂದು ಹೇಳುವ ಮೂಲಕ ಏಕದಿನ ಕ್ರಿಕೆಟ್ ನಿವೃತ್ತಿ ವಾಪಸ್ ಪಡೆದು ವಿಶ್ವಕಪ್ ಆಡುವ ಸುಳಿವು ನೀಡಿದಂತಿದೆ. ಹಲವು ಬಾರಿ ಸ್ಟೋಕ್ಸ್ ಅವರು ನಿವೃತ್ತಿ ಹಿಂಪಡೆದು ಏಕದಿನಕ್ಕೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ ಎಲ್ಲಿಯೂ ಸ್ಟೋಕ್ಸ್ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಇದೀಗ ಪರೋಕ್ಷವಾಗಿ ತಮ್ಮ ಕಮ್ಬ್ಯಾಕ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಟೋಕ್ಸ್ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಿ ತಂಡಕ್ಕೆ ಮತ್ತೆ ಮರಳಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಹಲವು ಕ್ರಿಕೆಟಿಗರು ನಿವೃತ್ತಿ ಘೋಷಿಸಿ ಮತ್ತೆ ಕ್ರಿಕೆಟ್ಗೆ ಮರಳಿದ ಹಲವು ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಸ್ಟೋಕ್ಸ್ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೇ ವೇಳೆ ತಂಡದ ಕೋಚ್ ಮ್ಯಾಥ್ಯೂ ಮಾಟ್ ಅವರು ಏಕ ದಿನ ವಿಶ್ವ ಕಪ್ ಟ್ರೋಫಿ ತಮ್ಮಲ್ಲೇ ಉಳಿಸಿಕೊಳ್ಳಬೇಕಾದರೆ ಬೆನ್ ಸ್ಟೋಕ್ಸ್(Ben Stokes) ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದಿದ್ದರು. ಇದಲ್ಲದೆ ಹಲವು ಮಾಜಿ ಆಟಗಾರರು ಕೂಡ ಸ್ಟೋಕ್ಸ್ ಅವರು ತಮ್ಮ ನಿರ್ಧಾರವನ್ನು ಬದಲಿಸಿ ಏಕದಿನ ಪಂದ್ಯ ಆಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಕೋಚ್ ಮತ್ತು ಹಿರಿಯ ಮಾಜಿ ಆಟಗಾರರ ಮನವಿಗೆ ಬೆಲೆ ಕೊಟ್ಟು ಸ್ಟೋಕ್ಸ್ ತಮ್ಮ ನಿರ್ಧಾರ ಬದಲಿಸಿಯಾರೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IPL 2023 : ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಸಿಎಸ್ಕೆ ಶಿಬಿರ ತೊರೆದ ಬೆನ್ ಸ್ಟೋಕ್ಸ್
ಅತಿಯಾದ ಕ್ರಿಕೆಟ್ ಒತ್ತಡದಿಂದ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯಲು ನಿರ್ಧರಿಸಿದ್ದರು. 2011 ರಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕದಿನ ಕ್ರಿಕೆಟ್ಗೆ ಪಾರ್ದಾಪಣೆ ಮಾಡಿದ ಸ್ಟೋಕ್ಸ್ ಇದುವರೆಗೆ 104 ಪಂದ್ಯವನ್ನು ಆಡಿದ್ದು, 2,919 ರನ್ಗಳನ್ನು ಗಳಿಸಿ 3 ಶತಕದೊಂದಿಗೆ, 21 ಅರ್ಧ ಶತಕವನ್ನು ಸಿಡಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2019ರ ವಿಶ್ವಕಪ್ನ ಮಹತ್ತರ ಪಂದ್ಯದಲ್ಲಿ ಔಟಾಗದೆ 84 ರನ್ ಗಳಿಸಿದ್ದು, ಸ್ಟೋಕ್ಸ್ ಶ್ರೇಷ್ಠ ಸಾಧನೆಗಳಲ್ಲಿ ಒಂದು. ಆಲ್ ರೌಂಡರ್ ಆಗಿರುವ ಸ್ಟೋಕ್ಸ್ ಬೌಲಿಂಗ್ನಲ್ಲಿ 74 ವಿಕೆಟ್ ಗಳನ್ನು ಪಡೆದಿದ್ದಾರೆ.
ವಿಶ್ವ ಕಪ್ ಟೂರ್ನಿ ಅಕ್ಟೋಬರ್ 5 ರಿಂದ ಆರಂಭಗೊಂಡು ನವೆಂಬರ್ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ.