ಮುಂಬಯಿ: ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup) ಭಾರತ ತಂಡದಲ್ಲಿ ಆರ್. ಅಶ್ವಿನ್ಗೆ ಅವಕಾಶ ನೀಡಬೇಕು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಸಲಹೆ ನೀಡಿದ್ದಾರೆ.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು, ಇದಾದ ಬಳಿಕ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಮತ್ತೊಮ್ಮೆ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ, ತವರಿನಲ್ಲಿ ಎರಡನೇ ಬಾರಿಗೆ ಒಟ್ಟಾರೆ ಮೂರನೇ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ.
ಏಕದಿನ ವಿಶ್ವಕಪ್ ಟೂರ್ನಿ ಕುರಿತು ಮಾತನಾಡಿದ ಅಜಯ್ ಜಡೇಜಾ, ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವ ಕಪ್ ತಂಡದಲ್ಲಿದ್ದರೆ ಭಾರತಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದಿದ್ದಾರೆ. ಭಾರತದ ವಾತಾವರಣದಲ್ಲಿ ಅಶ್ವಿನ್ ಪರಿಣಾಮಕಾರಿ ದಾಳಿ ನಡೆಸಬಲ್ಲರು. ಜತೆಗೆ ಅವರಿಗೆ ಭಾರತದ ಪಿಚ್ಗಳ ಬಗ್ಗೆ ಅಪಾರ ಅನುಭವವಿದೆ. ಆದ್ದರಿಂದ ಅವರಿಗೆ ಅವಕಾಶ ನೀಡಬೇಕು ಎಂದು ಅಜಯ್ ಜಡೇಜಾ ಹೇಳಿದ್ದಾರೆ.
“ಅಶ್ವಿನ್ ಬೌಲಿಂಗ್ ಜತೆಗೆ ಬ್ಯಾಟಿಂಗ್ನಲ್ಲಿಯೂ ನೆರವಾಗಬಲ್ಲರು. ಹಲವು ಪಂದ್ಯದಲ್ಲಿ ತಂಡವನ್ನು ಸೋಲಿನಿಂದ ಪಾರುಮಾಡಿದ ನಿದರ್ಶನಗಳು ನಮ್ಮ ಕಣ್ಣಮುಂದಿದೆ. ಆದ್ದರಿಂದ ಅವರು ತಂಡದ ಭಾಗವಾದರೆ ಭಾರತಕ್ಕೆ ಹೆಚ್ಚಿನ ಲಾಭವಿದೆ” ಎಂದು ಅಜಯ್ ಜಡೇಜಾ ಹೇಳಿದ್ದಾರೆ.
ಇದನ್ನೂ ಓದಿ | IND VS SL | ರಾಜ್ಕೋಟ್ನಲ್ಲಿ ಟೀಮ್ ಇಂಡಿಯಾ ಸರಣಿ ಗೆಲುವಿನ ದರ್ಬಾರ್!