ನವದೆಹಲಿ: ಏಕದಿನ ವಿಶ್ವಕಪ್ಗೆ(ICC World Cup) ಆಸ್ಟ್ರೇಲಿಯಾ ಸೇರಿ ಕೆಲ ದೇಶಗಳು ಈಗಾಲೇ ತಂಡ ಪ್ರಕಟಿಸಿದೆ. ಆದರೆ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಭಾರತ ಕೆಲ ಆಟಗಾರರ ಫಿಟ್ನೆಸ್ ರಿಪೋರ್ಟ್ಗಾಗಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಆದರೆ ಮಾಜಿ ಆಟಗಾರ ಆಕಾಶ್ ಚೋಪ್ರಾ(Aakash Chopra) ಅಚ್ಚರಿಕೆಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಸ್ನಾಯು ಸೆಳೆತದ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿರುವ ಕೆ.ಎಲ್ ರಾಹುಲ್(KL Rahul) ಅವರು ತಂಡಕ್ಕೆ ಮರಳಿದರೆ ಕೇರಳದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಸಂಜು ಸ್ಯಾಮ್ಸನ್(sanju samson) ಅವರು ವಿಶ್ವಕಪ್ ತಂಡಕ್ಕೆ ಆಯ್ಕೆ ಕಷ್ಟ ಸಾಧ್ಯ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಜತೆಗೆ ಇದಕ್ಕೆ ಕಾರಣ ಏನೆಂಬುವುದನ್ನು ಕೂಡ ತಿಳಿಸಿದ್ದಾರೆ.
ರಾಹುಲ್ ಮೊದಲ ಆಯ್ಕೆ
ರಿಷಭ್ ಪಂತ್ ಅವರು ಅಪಘಾತದಿಂದಾಗಿ ತಂಡದಿಂದ ಹೊರಗುಳಿದ ಕಾರಣ ಅವರ ಸ್ಥಾನಕ್ಕೆ ಅನುಭವಿ ವಿಕೆಟ್ ಕೀಪರ್ ಆಗಿ ರಾಹುಲ್ ಮೊದಲ ಆಯ್ಕೆಯಾಗಿದ್ದಾರೆ. ಜತೆಗೆ ನಾಲ್ಕನೇ ಕ್ರಮಾಂಕಕ್ಕೂ ರಾಹುಲ್ ಪರಿಹಾರ. ಇನ್ನು ಮೀಸಲು ಕೀಪರ್ ಆಗಿ ಇಶಾನ್ ಕಿಶನ್ ಆಯ್ಕೆಯಾಗುವ ಕಾರಣ ಈ ಕೋಟ ಭರ್ತಿಯಾಗಲಿದೆ. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವುದು ಬಹುತೇಕ ಖಚಿತ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಬಾಟಿ ರಾಯುಡು ಅವರಿಗೆ ಎದುರಾಗಿದ್ದ ಸನ್ನಿವೇಶ ಇದೀಗ ಸಂಜು ಸ್ಯಾಮ್ಸನ್‌ಗೂ ಎದುರಾಗಿದೆ. ವಿಶ್ವಕಪ್ ಮಾತ್ರವಲ್ಲದೆ ಏಷ್ಯಾ ಕಪ್ಗೂ ಸಂಜು ಆಯ್ಕೆಯಾಗುವುದು ಕಷ್ಟ. ಅವರಿಗೆ ಈ ಟೂರ್ನಿಯಲ್ಲಿ ಅವಕಾಶ ಸಿಗದೇ ಹೋದರು ಇನ್ನು ಕೂಡ ವಯಸ್ಸಿದೆ ಎಂದು ಚೋಪ್ರಾ ಹೇಳಿದರು.
ಇದನ್ನೂ ಓದಿ ICC World Cup 2023: ಪಾಕ್ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ; ಕೇಂದ್ರ ಸರ್ಕಾರ
ಸಂಪೂರ್ಣ ಫಿಟ್ ಆಗಿಲ್ಲ ರಾಹುಲ್-ಅಯ್ಯರ್
ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡು ಅಭ್ಯಾಸ ನಡೆಸುತ್ತಿದ್ದರೂ. ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಏಕದಿನ ವಿಶ್ವಕಪ್ಗೆ ಕೆಲವೇ ದಿನಗಳು ಬಾಕಿ ಇರುವಾಗ ಅವಸರ ಮಾಡಿ ಇವರನ್ನು ಆಡಿಸದರೆ ಮತ್ತೆ ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಇನ್ನೂ ಕೆಲ ದಿನಗಳ ಫಿಟ್ನೆಸ್ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅವರು ಏಷ್ಯಾ ಕಪ್ನಲ್ಲಿ(Asia Cup 2023) ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಸದ್ಯ ಎನ್ಸಿಎಯಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸದಲ್ಲಿ ತೊಡಗಿರುವ ರಾಹುಲ್ ಮತ್ತು ಅಯ್ಯರ್ ಅವರು ಸೆಪ್ಟಂಬರ್ನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ್ಲಲಿ ಆಡುವುದು ಖಚಿತ ಎಂದು ತಿಳಿದುಬಂದಿದೆ. ಅಲ್ಲಿಯ ವರೆಗೆ ಈ ಉಭಯ ಆಟಗಾರರು ಯಾವುದೇ ಕ್ರಿಕೆಟ್ ಸರಣಿಯಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ವಿಶ್ವಕಪ್ನಲ್ಲಿ ಈ ಆಟಗಾರರ ಪ್ರದರ್ಶನ ಭಾರತ ತಂಡಕ್ಕೆ ಪ್ರಮುಖವಾಗಿದೆ. ಹೀಗಾಗಿ ಬಿಸಿಸಿಐ ಅವರ ಮೇಲೆ ವಿಶೇಷ ಕಾಳಜಿ ವಹಿಸಿಕೊಂಡಿದೆ.