Site icon Vistara News

ICC World Cup: ವಿಶ್ವಕಪ್​ನಲ್ಲಿ 4ನೇ ಕ್ರಮಾಂಕಕ್ಕೆ ಕೊಹ್ಲಿ​ಪರ್ಫೆಕ್ಟ್; ಗೆಳೆಯನಿಂದ ಸಲಹೆ

Indian cricketer virat kohli

ಜೊಹಾನ್ಸ್​ಬರ್ಗ್​: ಟೀಮ್​ ಇಂಡಿಯಾದಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಅದು ನಾಲ್ಕನೇ ಕ್ರಮಾಂಕದಲ್ಲಿ ಪರಿಪೂರ್ಣ ಆಟಗಾರ ಇಲ್ಲದಿರುವುದು. ಯುವರಾಜ್​ ಸಿಂಗ್​(Yuvraj Singh) ಅವರು ಭಾರತ ತಂಡದಿಂದ ನಿವೃತ್ತಿಯಾದ ಬಳಿಕ ಈ ಸ್ಥಾನಕ್ಕೆ ಸೂಕ್ತ ಆಟಗಾರ ಲಭ್ಯವಾಗಲೇ ಇಲ್ಲ. ಈ ಸ್ಥಾನಕ್ಕೆ ಆಟಗಾರನನ್ನು ಕಳೆದ 2019 ವಿಶ್ವಕಪ್​ನಿಂದಲೂ ಬಿಸಿಸಿಐ ಹುಡುಕುತ್ತಲೇ ಇದೆ. ಇದೀಗ ಮತ್ತೊಂದು ವಿಶ್ವಕಪ್(ICC World Cup)​ ಬಂದರೂ ಈ ಸ್ಥಾನಕ್ಕೆ ಸೂಕ್ತ ಆಟಗಾರ ಸಿಕ್ಕಿಲ್ಲ. 2019 ವಿಶ್ವಕಪ್​ ಸೋಲಿಗೂ ಕೂಡ ನಾಲ್ಕನೇ ಕ್ರಮಾಂಕದ ಆಟಗಾರನ ಕೊರತೆಯೇ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಈ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಹಾರ್ಡ್​ ಹಿಟ್ಟರ್​ ಎಬಿ ಡಿ ವಿಲಿಯರ್ಸ್(AB de Villiers) ಅವರು ವಿರಾಟ್​ ಕೊಹ್ಲಿ(virat kohli) ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಭಾರತಕ್ಕೆ ಹೆಚ್ಚು ಲಾಭ

​ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ ವಿಲಿಯರ್ಸ್​, ಇನಿಂಗ್ಸ್​ ಬೆಳೆಸುವ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯ ಸವಾಲನ್ನು ನಿರ್ವಹಿಸಬಲ್ಲ ಸಾಮರ್ಥ್ಯ ವಿರಾಟ್​ ಕೊಹ್ಲಿಗೆ ಇದೆ. ಇದನ್ನು ನಾನು ಐಪಿಎಲ್​ನಲ್ಲಿ ನೋಡಿದ್ದೇನೆ. ಅವರ ಜತೆ ಆಡುವಾಗ ಇದು ನನ್ನ ಅರಿವಿಗೆ ಬಂದಿದೆ. ಹೀಗಾಗಿ ಅವರು ನಾಲ್ಕನೇ ಸ್ಥಾನದಲ್ಲಿ ಆಡಲು ಪರಿಪೂರ್ಣ ಫಿಟ್ ಆಗಿದ್ದಾರೆ. ತಂಡದ ಗೆಲುವು ಸೋಲು ನಿರ್ಧಾರವಾಗುವುದು ಈ ಸ್ಥಾನದಲ್ಲಿ ಆಡುವ ಆಟಗಾರ ಪ್ರದರ್ಶನದಿಂದ ಕೊಹ್ಲಿ ಈ ಸ್ಥಾನದಲ್ಲಿ ಆಡಿದರೆ ಭಾರತಕ್ಕೆ ಹೆಚ್ಚು ಲಾಭವಿದೆ” ಎಂದು ಎಬಿಡಿ ಸೂಕ್ತ ಸಲಹೆಯೊಂದನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಕೋಚ್​ ರವಿಶಾಸ್ತ್ರಿ ಕೂಡ ನಾಲ್ಕನೇ ಕ್ರಮಾಂಕ್ಕೆ ಕೊಹ್ಲಿ ಸೂಕ್ತ ಎಂದು ಹೇಳಿದ್ದರು.

ಕೊಹ್ಲಿ ಅದ್ಭುತ ವ್ಯಕ್ತಿ

16ನೇ ಆವೃತ್ತಿಯ ಐಪಿಎಲ್​ ವೇಳೆ ಆರ್​ಸಿಬಿ ತಂಡದ ಮಾಜಿ ಆಟಗಾರನಾಗಿರುವ ಎಬಿಡಿ ಅವರು ಬಾಕ್ಸ್​ ಆರ್​ಸಿಬಿ ಕಾರ್ಯಕ್ರಮದಲ್ಲಿ ವಿರಾಟ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಈ ವೇಳೆ “ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆತ ಕೊಂಚ ಕೋಪಿಷ್ಟ ಹಾಗೂ ಅಹಂಕಾರಿ ಎಂದುಕೊಂಡಿದ್ದೆ. ಏಕೆಂದರೆ ಅವರು ಆಡುವ ಬೇಳೆ ಹಲವು ಬಾರಿ ಇತರ ತಂಡದ ಆಟಗಾರರೊಂದಿಗೆ ಕಿರಿಕ್​ ಮಾಡಿದ್ದರು. ಆದರೆ ದಿನಕಳೆದಂತೆ ಕೊಹ್ಲಿ ಜತೆ ಬೆರೆಯುತ್ತಿದ್ದಂತೆಯೇ, ಅವರ ಕುರಿತಾದ ತಮ್ಮ ನಿಲುವು ಬದಲಾಯಿತು. ಅವರ ಮೇಲೆ ನನಗೆ ಸಾಕಷ್ಟು ಗೌರವ ಮೂಡಿತು. ಅವರೊಬ್ಬ ಅದ್ಭುತ ವ್ಯಕ್ತಿ ಜತೆಗೆ ಉತ್ತಮ ಕ್ರಿಕೆಟಿಗ” ಎಂದು ಎಬಿಡಿ ಹೇಳಿದ್ದರು. ಸದ್ಯ ಕೊಹ್ಲಿ ಮತ್ತು ಎಬಿಡಿ ಉತ್ತಮ ಸ್ನೇಹಿತರಾಗಿದ್ದಾರೆ. ಕೊಹ್ಲಿ ಬ್ಯಾಟಿಂಗ್​ ಫಾರ್ಮ್​ ಕಳೆದುಕೊಂಡಾಗ ಅವರ ಬಗೆಗಿನ ಟೀಕೆಯನ್ನು ಎಬಿಡಿ ಖಂಡಿಸುವ ಮೂಲಕ ಕೊಹ್ಲಿಗೆ ಬೆಂಬಲ ಸೂಚಿಸುತ್ತಿದ್ದರು.

ಇದನ್ನೂ ಓದಿ AB De Villiers| ಬ್ಯಾಟ್​ ಬದಿಗಿಟ್ಟ ಬಳಿಕ ಮೈಕ್​ ಹಿಡಿಯಲು ಸಜ್ಜಾದ ಎಬಿ ಡಿ ವಿಲಿಯರ್ಸ್​!

ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿ ಉತ್ತಮ ಸಾಧನೆ

ವಿರಾಟ್​ ಕೊಹ್ಲಿ ಅವರು ಆರಂಭಿಕ ದಿನಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಚೇಸ್​ ಮಾಸ್ಟರ್​ ಎಂದು ಕರೆಯಲಾಗುತ್ತಿತ್ತು. ಧೋನಿ ನಾಯಕತ್ವದಲ್ಲಿ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದ ವೇಳೆ 7 ಶತಕಗಳು ದಾಖಲಾಗಿದೆ. ಒಟ್ಟು 39 ಇನಿಂಗ್ಸ್​ನಲ್ಲಿ ಅವರು 55.21 ಸರಾಸರಿ ಮತ್ತು 90.66 ಸ್ಟ್ರೈಕ್ ರೇಟ್‌ನಲ್ಲಿ 1,767 ರನ್ ಗಳಿಸಿದ್ದಾರೆ. ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೊನೆಯದಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು.

Exit mobile version