ಬೆಂಗಳೂರು: ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ಗೆ(ICC World Cup 2023) ಈಗಾಗಲೇ 5 ದೇಶಗಳು ತಂಡವನ್ನು ಪ್ರಕಟಿಸಿದೆ. ಇದೀಗ ನೆದರ್ಲ್ಯಾಂಡ್ ಸರದಿ. ಗುರುವಾರ 15 ಮಂದಿ ಸದಸ್ಯರ ತಂಡವನ್ನು(Netherlands 15-members squad) ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ನೆದರ್ಲ್ಯಾಂಡ್ಸ್ ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಸುತ್ತಿಗೆ ಅವಕಾಶ ಪಡೆದಿತ್ತು.
ಆರ್ಸಿಬಿ ಮಾಜಿ ಆಟಗಾರ
ಅಚ್ಚರಿಯ ಆಯ್ಕೆ ಎಂದರೆ ಅನುಭವಿ ರೋಲೋಫ್ ವ್ಯಾನ್ ಡೆರ್ ಮೆರ್ವೆ(Roelof van der Merwe) ಮತ್ತು ಕಾಲಿನ್ ಅಕರ್‌ಮನ್(Colin Ackermann). ಉಭಯ ಆಟಗಾರರು ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕಾಟ್ ಎಡ್ವರ್ಡ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ರೋಲೋಫ್ ವ್ಯಾನ್ ಡೆರ್ ಮೆರ್ವೆ ಐಪಿಎಲ್ನಲ್ಲಿ ಆರ್ಸಿಬಿ(RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಒಟ್ಟು 21 ಐಪಿಎಲ್ ಪಂದ್ಯಗಳನ್ನು ಆಡಿ 159 ರನ್ ಮತ್ತು 21 ವಿಕೆಟ್ ಪಡೆದಿದ್ದಾರೆ. 2009ರಲ್ಲಿ ಅವರು ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯ ಆಡಿದ್ದರು. ಕೆಕೆಆರ್ ಎದುರಾಳಿ ಈ ಪಂದ್ಯದಲ್ಲಿ ಅವರು ಅಜೇಯ 43 ರನ್ ಗಳಿಸಿ ಆರ್ಸಿಬಿಗೆ ಗೆಲುವು ತಂದುಕೊಟ್ಟಿದ್ದರು.
ಪಾಕ್ ಮೊದಲ ಎದುರಾಳಿ
ನೆದರ್ಲ್ಯಾಂಡ್ಸ್ ತಂಡವು ಭಾರತ ವಿರುದ್ಧ ನವೆಂಬರ್ 11ರಂದು ವಿಶ್ವಕಪ್ ಪಂದ್ಯ ಆಡಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಟೂರ್ನಿಯ ಅಂತಿಮ ಲೀಗ್ ಪಂದ್ಯವೂ ಆಗಿದೆ. ನೆದರ್ಲ್ಯಾಂಡ್ಸ್ ತನ್ನ ವಿಶ್ವಕಪ್ ಅಭಿಯಾನವನ್ನು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 6ರಂದು ನಡೆಯಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 30 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಅಕ್ಟೋಬರ್ 3ರಂದು ಭಾರತದ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ.
ನೆದರ್ಲ್ಯಾಂಡ್ಸ್ ತಂಡ
ಸ್ಕಾಟ್ ಎಡ್ವರ್ಡ್ಸ್ (ನಾ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕೀಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.
ಇದನ್ನೂ ಓದಿ ICC World Cup 2023: ವಿಶ್ವಕಪ್ಗೆ ಬಾಲಿವುಡ್ ಬಾದ್ ಷಾ ರಾಯಭಾರಿ; ಆ ಒಂದು ‘ದಿನ’ಕ್ಕೆ ಶತಕೋಟಿ ಮಿಡಿತ
10 ತಾಣಗಳಲ್ಲಿ ಪಂದ್ಯವಾಳಿ
ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.