ಹರಾರೆ: ಶನಿವಾರ ರಾತ್ರಿ ನಡೆದ ಐಸಿಸಿ ವಿಶ್ವ ಕಪ್ ಅರ್ಹಾತಾ ಪಂದ್ಯಾವಳಿಯಲ್ಲಿ(ICC World Cup Qualifiers) ಜಿಂಬಾಬ್ವೆ(Zimbabwe vs West Indies) ತಂಡದ ಆಟಗಾರರು ತೋರಿದ ಕ್ರೀಡಾ ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆಘಾತಕಾರಿ ಸೋಲಿನಿಂದ ಮೈದಾನದಲ್ಲಿ ಹತಾಶರಾಗಿ ಕುಳಿತಿದ್ದ ಅಕೀಲ್ ಹೊಸೈನ್ ಅವರನ್ನು ಜಿಂಬಾಬ್ವೆ ಆಟಗಾರರು ಸಮಾಧಾನ ಪಡಿಸಿದ ದೃಶ್ಯ ಕ್ರಿಕೆಟಿನ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ವಿಂಡೀಸ್ ಆಟಗಾರನನ್ನು ಆಲಿಂಗಿಸಿ, ಕೈಕುಲುಕಿ ಸಮಾಧಾನ ಪಡಿಸಿ ಕ್ರೀಡಾ ಸ್ಫೂರ್ತಿ ಮೆರೆದರು. ಈ ಫೋಟೊವನ್ನು ಐಸಿಸಿ(ICC) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ‘ಸ್ಪಿರಿಟ್ ಆಫ್ ಕ್ರಿಕೆಟ್'(Spirit of Cricket) ಎಂದು ಬರೆದುಕೊಂಡಿದೆ.
ಹರಾರೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಜಿಂಬಾಬ್ವೆ ಸರ್ವಾಂಗೀಣ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 49.5 ಓವರ್ಗಳಲ್ಲಿ 268 ರನ್ ಗಳಿಸಿತು. ಜವಾಬಿತ್ತ ವೆಸ್ಟ್ ಇಂಡೀಸ್ ನಾಟಕೀಯ ಶೈಲಿಯಲ್ಲಿ ಕುಸಿತ ಕಂಡು ಸೋಲಿಗೆ ತುತ್ತಾಯಿತು. ಹ್ಯಾಟ್ರಿಕ್ ಗೆಲುವು ಸಾಧಿಸಿದ ಜಿಂಬಾಬ್ವೆ ‘ಎ’ ಗ್ರೂಪ್ನಲ್ಲಿ ಅಗ್ರಸ್ಥಾನ ಸಂಪಾದಿಸುವ ಮೂಲಕ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೆಶ ಪಡೆದಿದೆ.
ಉತ್ತಮ ಆರಂಭ ಪಡೆದ ವಿಂಡೀಸ್ ಒಂದು ಹಂತದಲ್ಲಿ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ ತಂಡದ ಮೊತ್ತ 200ರ ಗಡಿ ದಾಟಿತ್ತೇ ತಡ ನಾಟಕೀಯ ಕುಸಿತ ಕಂಡಿತು. ಜಾಸನ್ ಹೋಲ್ಡರ್, ರೋಮ್ವನ್ ಪೋವೆಲ್, ಕಿಮೊ ಪೌಲ್ ಯಾರೂ ಕೂಡ ತಂಡವನ್ನು ಆಧರಿಸಿ ನಿಲ್ಲದ ಪರಿಣಾಮ ಸೋಲು ಕಂಡಿತು. ವಿಂಡೀಸ್ ಪರ ಕೈಲ್ ಮೇಯರ್ಸ್ (56), ರೋಸ್ಟನ್ ಚೇಸ್(44), ಹೋಪ್(30) ಮತ್ತು ಪೂರನ್(34) ರನ್ ಗಳಿಸಿದರು.
ಇದನ್ನೂ ಓದಿ IND VS SL | ಶಮಿಯ ಮಂಕಡ್ ನಿರಾಕರಿಸಿ ಕ್ರೀಡಾ ಸ್ಫೂರ್ತಿ ಮೆರೆದ ರೋಹಿತ್ ಶರ್ಮಾ; ವಿಡಿಯೊ ವೈರಲ್
Always be there to acknowledge your opponents at the end of the day 🤝
— ICC (@ICC) June 25, 2023
Spirit of Cricket at the #CWC23 Qualifier and across the game 👏 pic.twitter.com/h1yReeAaiq
ಜಿಂಬಾಬ್ವೆ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ ಸಿಕಂದರ್ ರಾಜಾ(Sikandar Raza) ಪಂದ್ಯ ಶ್ರೇಷ್ಠ ಗೌರವ ಪಡೆದರು. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಜಾ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 68 ರನ್ ಬಾರಿಸಿದರು. ಬೌಲಿಂಗ್ನಲ್ಲಿಯೂ ಮಿಂಚಿದ ಅವರು ಪ್ರಮುಖ 2 ವಿಕೆಟ್ ಉರುಳಿಸಿದರು. ಜತೆಗೆ 2 ಅದ್ಭುತ ಕ್ಯಾಚ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ನಾಯಕ ಕ್ರೇಗ್ ಎರ್ವಿನ್(Craig Ervine) 47, ರಿಯಾನ್ ಬರ್ಲ್(Ryan Burl) 50 ರನ್ ಕೊಡುಗೆ ಸಲ್ಲಿಸಿದರು.