ಚೆನ್ನೈ: ಬಹುನಿರೀಕ್ಷಿತ ಪುರುಷರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(ICC World Cup) ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕೂ ಮುನ್ನ ಹಲವು ಕ್ರಿಕೆಟ್ ಪಂಡಿತರು ಈ ಬಾರಿ ವಿಶ್ವಕಪ್ ಗೆಲ್ಲುವ ತಂಡಗಳ ಭವಿಷ್ಯವನ್ನು ನುಡಿಯಲು ಆರಂಭಿಸಿದ್ದಾರೆ. ಈ ಸಾಲಿಗೆ ಇದೀಗ ಸ್ಪಿನ್ನರ್ ಆರ್.ಅಶ್ವಿನ್(Ravichandran Ashwin) ಕೂಡ ಸೇರ್ಪಡೆಗೊಂಡಿದ್ದಾರೆ. ಭಾರತ ತಂಡ(Team India) ವಿಶ್ವಕಪ್ ಗೆಲ್ಲಬೇಕಾದರೆ ಏನು ಮಾಡಬೇಕು ಎನ್ನುವ ವಿಚಾರವನ್ನು ತಿಳಿಸಿದ್ದಾರೆ.
ಒತ್ತಡ ನಿವಾರಣೆ
ಭಾರತ ತಂಡ ಹಲವು ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಿರುವುದು ಒತ್ತಡ ಹೇರಿಕೆಯಿಂದಾಗಿ. ಭಾರತ ಈ ಬಾರಿಯೂ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಈ ವಿಚಾರ ನನಗು ತಿಳಿದಿದೆ. ಆದರೆ, ಮಾಜಿ ಆಟಗಾರರು ಟೂರ್ನಿ ಆರಂಣಕ್ಕೂ ಮುನ್ನವೇ ಕಪ್ ಗೆಲ್ಲಲೇ ಬೇಕು ಎನ್ನುವ ಹೇಳಿಯೆಯಿಂದ ಒತ್ತಡ ಹೇರಬಾರದು. ಒಂದೊಮ್ಮೆ ಈ ರೀತಿಯ ಹೇಳಿಕೆಗಳು ನೀಡಿದರೆ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬಿದ್ದು ಮತ್ತೊಮ್ಮೆ ಕಪ್ ಗೆಲ್ಲುವಲ್ಲಿ ಭಾರತ ವಿಫಲವಾಗುವುದು ಖಚಿತ. ಹೀಗಾಗಿ ಆಟಗಾರರ ಬಗ್ಗೆ ಯಾವುದೇ ಕಮೆಂಟ್ ಮಾಡಬೇಡಿ, ಆಗ ಆಟಗಾರರು ಫ್ರೀ ಮೈಂಡ್ನಲ್ಲಿ ಆಡಿ ಪಂದ್ಯಗಳನ್ನು ಗೆಲ್ಲುತ್ತಾರೆ ಎಂದು ಅಶ್ವಿನ್ ಅವರು ಹ=ಮಾಜಿ ಆಟಗಾರರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ.
ಆಸೀಸ್ ಫೇವರಿಟ್ ತಂಡ
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದಾಗಿದೆ. ಆಸ್ಟ್ರೇಲಿಯಾ ತಂಡ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಇದೇ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಕೂಡ ಜಯಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಜತೆಗೆ ಭಾರತದಲ್ಲಿ ಆಡಿದ ಅನುಭವವೂ ಆಸೀಸ್ ತಂಡಕ್ಕಿದೆ. ಐಪಿಎಲ್ ಆಡಿರುವುದರಿಂದ ದೇಶದ ಎಲ್ಲ ಮೈದಾನದ ಪರಿಸ್ಥಿತಿಗೂ ಒಗ್ಗಿಕೊಂಡು ಆಡುವ ಕಲೆ ಆಸೀಸ್ ಆಟಗಾರರು ಕಲಿತಿದ್ದಾರೆ. ಹೀಗಾಗಿ ಆಸೀಸ್ ಕೂಡ ಫೇವರಿಟ್ ತಂಡವಾಗಿದೆ ಎಂದರು.
ಇದನ್ನೂ ಓದಿ ICC World Cup: ವಿಶ್ವಕಪ್ನ ಪರಿಷ್ಕೃತ ವೇಳಾಪಟ್ಟಿ; ಟೀಮ್ ಇಂಡಿಯಾದ ಬೆಂಗಳೂರಿನ ಪಂದ್ಯವೂ ಅದಲು-ಬದಲು
ಅಶ್ವಿನ್ಗೆ ಸಿಗಲಿದೆಯೇ ಅವಕಾಶ?
ವಿಶ್ವಕಪ್ ಟೂರ್ನಿಗೆ ಭಾರತ ತಂಡ ಮುಂದಿನ ತಿಂಗಳು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಅನುಭವಿ ಸ್ಪಿನ್ನರ್ ಆಗಿರುವ ಕಾರಣ ಆರ್.ಅಶ್ವಿನ್ಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ ಭಾರತದ ಪಿಚ್ಗಳಲ್ಲಿ ಅಶ್ವಿನ್ ಉತ್ತಮ ಹಿಡಿತ ಸಾಧಿಸುವ ಜತೆಗೆ ಹಲವು ಪಂದ್ಯಗಳನ್ನು ಆಡಿರುವ ಅಪಾರ ಅನುಭವ ಹೊಂದಿದ್ದಾರೆ. ಹೀಗಾಗಿ ಅವರನ್ನು ಆಯ್ಕೆ ಮಾಡಬಹುದು. ಅನೇಕ ಹಿರಿಯ ಆಟಗಾರರು ಕೂಡ ಅಶ್ವಿನ್ಗೆ ಅವಕಾಶ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ತಂಡದಲ್ಲಿ ಓರ್ವ ಅನುಭವಿ ಸ್ಪಿನ್ನರ್ ಕೊರತೆಯೂ ಎದ್ದ ಕಾಣುತ್ತಿರುವುದರಿಂದ ಈ ಸ್ಥಾನಕ್ಕೆ ಅಶ್ವಿನ್ ಸೂಕ್ತವಾಗಬಹುದು.
ಭಾರತ-ಪಾಕ್ ಹಾಕಿ ಪಂದ್ಯಕ್ಕೆ ಹಾಜರಾಗಿದ್ದ ಅಶ್ವಿನ್
ಬುಧವಾರ ಚೆನ್ನೈಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ(Asian Champions Trophy Hockey) ಪಂದ್ಯಕ್ಕೆ ಅಶ್ವಿನ್ ಕೂಡ ಆಗಮಿಸಿದ್ದರು. ಉಭಯ ಆಟಗಾರರಿಗೂ ಮೈದಾನಕ್ಕೆ ಬಂದು ಶುಭ ಹಾರೈಸಿದ್ದರು. ನಾಯಕ ಹರ್ಮನ್ಪ್ರೀತ್ ಸಿಂಗ್(Harmanpreet Singh) ಅವರ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ 4-0 ಅಂತರದಲ್ಲಿ ಗೆದ್ದು ಬೀಗಿತ್ತು.