ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್(ICC World Cup) ಆರಂಭಕ್ಕೂ ಮುನ್ನವೇ ಪಾಕಿಸ್ತಾನ(Pakistan’s World Cup 2023) ತಂಡಕ್ಕೆ ಹಿನ್ನಡೆಯಾಗಿದೆ. ಭಾರತಕ್ಕೆ ಪ್ರಯಾಣಿಸಲು ವೀಸಾಗಳನ್ನು(visa) ಪಡೆಯಲು ವಿಳಂಬವಾದ ಕಾರಣ ಪಾಕ್ ತಂಡದ ದುಬೈ ಭೇಟಿ ರದ್ದುಗೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡ ವಿಶ್ವಕಪ್ ಪಂದ್ಯಗಳನ್ನು ಆಡುವ ಮುನ್ನ ದುಬೈನಲ್ಲಿ ಪೂರ್ವ ತಯಾರಿ ನಡೆಸುವ ಯೋಜನೆಯಲ್ಲಿತ್ತು. ಆದರೆ ವೀಸಾ ಸಮಸ್ಯೆಯಿಂದ ಈ ಯೋಜನೆಗೆ ಅಡ್ಡಿಯುಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತ ಪ್ರಯಾಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್ ವಿರುದ್ಧ ಆಡಲಿದೆ. ಕ್ರಿಕ್ಇನ್ಫೋ ವರದಿಯ ಪ್ರಕಾರ, ಪಾಕಿಸ್ತಾನ ತಂಡವು ಈ ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕಾಗಿ ಮುಂದಿನ ವಾರದ ಆರಂಭದಲ್ಲಿ ದುಬೈಗೆ ಪ್ರಯಾಣಿಸಬೇಕಿತ್ತು. ಆದರೆ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ವಿಫಲವಾದ ಕಾರಣ ಪಾಕ್ ತಂಡದ ದುಬೈ ಪ್ರವಾಸ ಮೊಟಕುಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ತಂಡ ಬುಧವಾರ ಮುಂಜಾನೆ ಲಾಹೋರ್ನಿಂದ ದೆಹಲಿಗೆ ಆಗಮಿಸಿ ಆ ಬಳಿಕ ಹೈದಾರಾಬಾದ್ಗೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ. ಏಷ್ಯಾಕಪ್ ನಡೆಯುತ್ತಿದ್ದ ವೇಳೆಯೇ ಪಾಕ್ ಕ್ರಿಕೆಟ್ ಮಂಡಳಿ ವೀಸಾ ಪಡೆಯಲು ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಕೆಲ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾದ ಕಾರಣ ವಿಳಂಬವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ ICC World Cup 2023: ಭಾರತ ಬಿಟ್ಟು ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ಗಂಭೀರ್
ಪಾಕ್ ತಂಡಕ್ಕೆ ಮಾತ್ರ ಸಮಸ್ಯೆ
ರಾಜತಾಂತ್ರಿಕವಾಗಿಯೂ ಭಾರತ ಮತ್ತು ಪಾಕ್ ಸಂಬಂಧ ಮೊದಲಿನಿಂದಲೇ ಸರಿಯಿಲ್ಲ. ಹೀಗಾಗಿ ಉಭಯ ದೇಶಗಳ ಪ್ರಯಾಣಕ್ಕೆ ವೀಸಾ ಪಡೆಯಲು ಕೂಡ ಹಲವು ನಿರ್ಭಂದ ಮತ್ತು ಅನೇಕ ಪ್ರಕ್ರಿಯೆಗಳು ಕೂಡ ಇವೆ. ಈಗಾಗಲೇ ಭಾರತದಲ್ಲಿ ವಿಶ್ವಕಪ್ ಆಡಲಿರುವ 10 ತಂಡಗಳ ಪೈಕಿ 9 ದೇಶಗಳಿಗೆ ವೀಸಾ ಲಭಿಸಿದೆ. ಆದರೆ ಪಾಕ್ ತಂಡಕ್ಕೆ ಮಾತ್ರ ವೀಸಾ ಸಿಗಬೇಕಿದೆ.
ಪ್ರೇಕ್ಷಕರಿಲ್ಲದೆ ಪಂದ್ಯ
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಣ ಅಭ್ಯಾಸ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಇದಕ್ಕೆ ಕಾರಣ ಇಲ್ಲಿ ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿರುವುದು. ಈಗಾಗಲೇ ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಯುವ ವೇಗಿ ನಸೀಮ್ ಶಾ ಅವರು ಏಷ್ಯಾಕಪ್ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರು: ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್.