ಅಹಮದಾಬಾದ್: ವಿಶ್ವಕಪ್(icc world cup 2023) ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಮುರಿಯಲು ದಕ್ಷಿಣ ಆಫ್ರಿಕಾದ ಕ್ವಿಂಡನ್ ಡಿ ಕಾಕ್(Quinton de Kock) ಮುಂದಾಗಿದ್ದಾರೆ. ಹಾಲಿ ಆವೃತ್ತಿಯ ವಿಶ್ವಕಪ್ನಲ್ಲಿ 591 ರನ್ ಗಳಿಸಿರುವ ಡಿ ಕಾಕ್ ಅವರು ಸದ್ಯ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇವರಿಗೆ ಸಚಿನ್ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಹೌದು, ಡಿ ಕಾಕ್ ಅವರು ಕಣಿಟ್ಟಿರುವ ಸಚಿನ್ ಅವರ ದಾಖಲೆ ಯಾವುದೆಂದರೆ, ವಿಶ್ವಕಪ್ನ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ. ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ ಅವರು ವಿಶ್ವಕಪ್ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್ ಬಾರಿಸಿದ್ದರು. ಸದ್ಯ ಇದು ಈವರೆಗೆ ವಿಶ್ವಕಪ್ನ ದಾಖಲೆಯಾಗಿಯೇ ಉಳಿದುಕೊಂಡಿದೆ. ಈ ದಾಖಲೆಯನ್ನು ಮುರಿಯುವ ಅವಕಾಶ ಡಿ ಕಾಕ್ಗೆ ಇದೆ.
ಎಡಗೈ ಆಟಗಾರ ಡಿ ಕಾಕ್ ಹಾಲಿ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿದ್ದು ಸದ್ಯ 9 ಪಂದ್ಯಗಳಿಂದ 591 ರನ್ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಇನ್ನು 83 ರನ್ಗಳ ಅಗತ್ಯವಿದೆ. ಸೆಮಿಫೈನಲ್ ಪಂದ್ಯ ಇರುವ ಕಾರಣ ಡಿ ಕಾಕ್ಗೆ ಈ ಗುರಿ ತಲುಪುವುದು ಅದು ಕಷ್ಟದ ಮಾತಲ್ಲ. ಒಂದೊಮ್ಮೆ ಸೆಮಿಯಲ್ಲಿ ಗೆದ್ದರೆ ಫೈನಲ್ ಕೂಡ ಆಡುವ ಅವಕಾಶವೂ ಅವರ ಮುಂದೆ ತೆರೆದಿಡುತ್ತದೆ. ಆಗ ಇಲ್ಲಾದರೂ ಈ ರನ್ ಮೀರಿ ನಿಲ್ಲುವ ಮತ್ತೊಂದು ಅವಕಾಶ ಸಿಗಲಿದೆ. ವಿಶ್ವಕಪ್ ಟೂರ್ನಿಯ ಬಳಿಕ ಡಿ ಕಾಕ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ.
ಇದನ್ನೂ ಓದಿ IND vs NED: ನೆದರ್ಲೆಂಡ್ಸ್ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಅಲಭ್ಯ
ಕ್ಯಾಚ್ ದಾಖಲೆ
ಕ್ವಿಂಟನ್ ಡಿ ಕಾಕ್ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಸ್ಟ್ರೇಲಿಯಾದ ಮಾಜಿ ಆ್ಯಡಂ ಗಿಲ್ಕ್ರಿಸ್ಟ್ ಹಾಗೂ, ಸರ್ಫರಾಜ್ ಅಹ್ಮದ್ ಅವರ ಸಾಲಿಗೆ ಸೇರಿದ್ದಾರೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಡಿ ಕಾಕ್ ಆರು ಕ್ಯಾಚ್ಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಡಿ ಕಾಕ್ ಅಫಘಾನಿಸ್ತಾನದ ಬ್ಯಾಟರ್ಗಳಾದ ಇಬ್ರಾಹಿಂ ಜದ್ರನ್, ಹಶ್ಮತುಲ್ಲಾ ಶಾಹಿದಿ, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರ ಕ್ಯಾಚ್ಗಳನ್ನು ಪಡೆದು ಈ ದಾಖಲೆ ಬರೆದರು.
ಸಚಿನ್ ಅವರ ಈ ದಾಖಲೆಯನ್ನು ಮುರಿಯಲು ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಕಿವೀಸ್ನ ಯುವ ಆಟಗಾರ ರಚಿನ್ ರವೀಂದ್ರ ಅವರಿಗೂ ಅವಕಾಶವಿದೆ. 565*ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿರುವ ರಚಿನ್ ರವೀಂದ್ರಗೆ ಸಚಿನ್ ದಾಖಲೆ ಮುರಿಯಲು ರಚಿನ್ಗೆ ಇನ್ನು 109 ರನ್ಗಳ ಅವಶ್ಯವಿದೆ.
ಕೊಹ್ಲಿಗೂ ಅವಕಾಶ
ಸದ್ಯ ಆಡಿದ 8 ಪಂದ್ಯಗಳಲ್ಲಿ 543* ರನ್ ಗಳಿಸಿರುವ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಅವರು ಗರಿಷ್ಠ ರನ್ ಬಾರಿಸಿದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರ ಸಾರ್ವಕಾಲಿಕ ದಾಖಲೆ ಮುರಿಯಲು ಇವರಿಗೆ 131 ರನ್ಗಳ ಅಗತ್ಯವಿದೆ. ಭಾರತಕ್ಕೆ ನೆದರ್ಲೆಂಡ್ಸ್ ಮತ್ತು ಸೆಮಿ ಫೈನಲ್ ಸೇರಿ ಎರಡು ಪಂದ್ಯಗಳು ಬಾಕಿ ಉಳಿದಿವೆ. ಹೀಗಾಗಿ ಕೊಹ್ಲಿಗೆ ಈ ಮೊತ್ತವನ್ನು ಬಾರಿಸುವುದು ಕಷ್ಟದ ಮಾತಲ್ಲ.
ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಅಗ್ರ 5 ಆಟಗಾರರು
ಆಟಗಾರರು | ಪಂದ್ಯ | ಇನಿಂಗ್ಸ್ | ರನ್ |
ಸಚಿನ್ ತೆಂಡೂಲ್ಕರ್ | 11 | 11 | 673 |
ಮ್ಯಾಥ್ಯೂ ಹೇಡನ್ | 11 | 10 | 659 |
ರೋಹಿತ್ ಶರ್ಮ | 9 | 9 | 648 |
ಡೇವಿಡ್ ವಾರ್ನರ್ | 10 | 10 | 647 |
ಶಕೀಬ್ ಅಲ್ ಹಸನ್ | 8 | 8 | 606 |