ದುಬೈ: ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯ ಕಂಡ ಮೂರನೇ ಟೆಸ್ಟ್‌ನಲ್ಲಿ(India vs England 3rd Test) ಇಂಗ್ಲೆಂಡ್ ವಿರುದ್ಧ ಭಾರತ 434 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಗೆಲುವು ಭಾರತವು ಐಸಿಸಿ(ICC) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ICC WTC Points Table) 2023-25 ಅಂಕಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆರುವಂತೆ ಮಾಡಿದೆ.
ಭಾರತ ಈ ಗೆಲುವಿನೊಂದಿಗೆ 59.52 ಗೆಲುವಿನ ಶೇಕಡಾವಾರು ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಈ ಹಿಂದೆ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. 75 ಗೆಲುವಿನ ಶೇಕಡಾವಾರು(PCT) ಅಂಕ ಪಡೆದಿರುವ ನ್ಯೂಜಿಲ್ಯಾಂಡ್ ಅಗ್ರಸ್ಥಾನದಲ್ಲಿದೆ.
ICC WORLD TEST CHAMPIONSHIP
— Omkar (@Omkar33812039) February 18, 2024
STANDING
SRI LANKA STANDING …🤣🤣🤣 pic.twitter.com/QdlP9u00su
ವಿಶಾಖಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಸೋಲು ಕಂಡಿದ್ದ ಕಾರಣ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಾರಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆದ್ದು ಮತ್ತೆ 2ನೇ ಸ್ಥಾನ ಪಡೆದಿದೆ. ಉಳಿದಿರುವ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಅಗ್ರಸ್ಥಾನ ಪಡೆಯಬಹುದು. ಸೋಲು ಕಂಡ ಇಂಗ್ಲೆಂಡ್ 21.88 ಗೆಲುವಿನ ಶೇಕಡಾವಾರು ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ IND vs ENG: ಗೆಲುವಿನಲ್ಲೂ ದಾಖಲೆ ಬರೆದ ಭಾರತ; ವಿಂಡೀಸ್ನ 48 ವರ್ಷಗಳ ದಾಖಲೆ ಪತನ
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿರುವ ಟಾಪ್ 5 ತಂಡಗಳು
ನ್ಯೂಜಿಲ್ಯಾಂಡ್-75.0 (PCT)
ಭಾರತ-59.52 (PCT)
ಆಸ್ಟ್ರೇಲಿಯಾ-55.0 (PCT)
ಬಾಂಗ್ಲಾದೇಶ-50.0 (PCT)
ಪಾಕಿಸ್ತಾನ-36.66 (PCT)
ಇಂಗ್ಲೆಂಡ್ಗೆ ಹೀನಾಯ ಸೋಲು
ಪಂದ್ಯದ ನಾಲ್ಕನೇ ದಿನವಾದ ಭಾನುವಾರ 2 ವಿಕೆಟ್ ನಷ್ಟಕ್ಕೆ 196 ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(214*) ಅವರ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್(91) ಮತ್ತು ಸರ್ಫರಾಜ್ ಖಾನ್ (68*) ಅವರ ಅರ್ಧಶತಕದ ನೆರವಿನಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ಗೆ 430 ರನ್ ಬಾರಿಸಿ ಡಿಕ್ಲೇರ್ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 122 ರನ್ಗೆ ಸರ್ವಪತನ ಕಂಡಿತು. ಸರಣಿಯ ನಾಲ್ಕನೇ ಪಂದ್ಯ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿದೆ.
ಮೂರನೇ ದಿನದ ಆಟದ ವೇಳೆ ಬೆನ್ನು ನೋವಿಗೆಚ ಸಿಲುಕಿ ನಿವೃತ್ತಿ ಪಡೆದಿದ್ದ ಜೈಸ್ವಾಲ್, ಭಾನುವಾರ ಮತ್ತೆ ಕ್ರೀಸ್‌ಗೆ ಆಗಮಿಸಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿಕೊಂಡರು. 236 ಎಸೆತಗಳಲ್ಲಿ 214 ರನ್ ಗಳಿಸಿ ಅಜೇಯರಾಗು ಉಳಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್ ಹಾಗೂ 14 ಬೌಂಡರಿಗಳು ದಾಖಲಾಯಿತು. ಇದು ಜೈಸ್ವಾಲ್ ಅವರ ಸತತ ಎರಡನೇ ಟೆಸ್ಟ್ ದ್ವಿಶತಕವಾಗಿದೆ. ವಿಶಾಖಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ನಲ್ಲಿಯೂ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು.
ವಿಂಡೀಸ್ ದಾಖಲೆ ಪತನ
ಇದುವರೆಗಿನ ಟೆಸ್ಟ್ ಕ್ರಿಕೆಟ್ ಇತಿಹಾಸ ನೋಡುವುದಾದದರೆ, ಅತಿ ದೊಡ್ಡ ಗೆಲುವನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಇದೀಗ ಭಾರತ ತಂಡ ಎಂಟನೇ ಸ್ಥಾನಕ್ಕೇರಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿದೆ. 1976ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 425 ರನ್ಗಳಿಂದ ಗೆದ್ದಿತ್ತು. ಇದೀಗ ಭಾರತ 434 ರನ್ಗಳಿಂದ ಗೆದ್ದು ವೆಸ್ಟ್ ಇಂಡೀಸ್ನ 48 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.