ಲಾಹೋರ್: ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಭಾಗವಹಿಸಲು ಭಾರತ ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಬದಲಾಗಿ ಟೂರ್ನಿಯು ತಟಸ್ಥ ತಾಣದಲ್ಲಿ ಆಯೋಜನೆಯಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ (Ramiz Raja) ಮಾತನಾಡಿರುವ ವಿಡಿಯೊ ವೈರಲ್ ಆಗಿದೆ.
“ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಜತೆ ಕ್ರಿಕೆಟ್ ಆಡದಿದ್ದರೆ ವಾಣಿಜ್ಯಾತ್ಮಕವಾಗಿ ಭಾರಿ ನಷ್ಟ ಸಂಭವಿಸುತ್ತದೆ. ಜಾಹೀರಾತಿಗಾಗಿ ಭಾರತ ಕ್ರಿಕೆಟ್ ಪಂದ್ಯಕ್ಕೆ ವಿಶ್ವಾದ್ಯಂತ ಬಹಳಷ್ಟು ಬೇಡಿಕೆ ಇದೆ. ಒಂದೊಮ್ಮೆ ಭಾರತದ ಜತೆ ಪಾಕಿಸ್ತಾನ ಕ್ರಿಕೆಟ್ ಆಡದೇ ಇದ್ದರೆ ಪಾಕ್ ಕ್ರಿಕೆಟ್ ಮಂಡಳಿ ಕುಸಿತ ಕಾಣುವುದರಲ್ಲಿ ಅನುಮಾನವೇ ಇಲ್ಲ” ಎಂದು ರಮೀಜ್ ಹೇಳಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾರ್ಯನಿರ್ವಹಿಸುತ್ತಿರುವುದು ಐಸಿಸಿಯ ಶೇ.50ರಷ್ಟು ವರಮಾನದಿಂದ. ಐಸಿಸಿಗೆ ಹೆಚ್ಚಾಗಿ ಬಿಸಿಸಿಐನಿಂದ ವರಮಾನವಿರುವ ಕಾರಣ ಬಿಸಿಸಿಐಯನ್ನು ಎದುರು ಹಾಕಿಕೊಳ್ಳುವಂತಿಲ್ಲ. ಟೂರ್ನಿ ನಡೆಯಲು ಇನ್ನೂ ಒಂದು ವರ್ಷ ಬಾಕಿ ಇದೆ. ಆದ್ದರಿಂದ ಈ ಬಗ್ಗೆ ಯೋಜಿಸಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು” ಎಂದು ರಮೀಜ್ ರಾಜಾ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇಷ್ಟಕ್ಕೂ ಈ ವಿಡಿಯೊ ಯಾವ ಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿಲ್ಲ.
ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಎರಡನೇ ಅವಧಿಗೆ ಜಯ್ ಆಯ್ಕೆಯಾಗಿದ್ದಾರೆ. ಮಂಗಳವಾರ ಮುಂಬೈನಲ್ಲಿ ನಡೆದಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸಭೆಯಲ್ಲಿ ಮುಂದಿನ ಏಷ್ಯಾ ಕಪ್ ಟೂರ್ನಿಯ ಬಗ್ಗೆ ಮಾತನಾಡಿದ್ದರು. ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ಆಯೋಜಿಸಿದರೆ ಭಾರತ ಅಲ್ಲಿಗೆ ಹೋಗುವುದಿಲ್ಲ. ರಾಜಕೀಯ ಕಾರಣಗಳಿಂದಾಗಿ ನಾವು ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಿಲ್ಲ ಹಾಗೂ ಅವರು ಕೂಡ ಭಾರತಕ್ಕೆ ಬರಲು ಸಾಧ್ಯವಿಲ್ಲ. ಆದ್ದರಿಂದ ಈ ಟೂರ್ನಿಗೆ ತಟಸ್ಥ ಸ್ಥಳವನ್ನು ಆಯ್ಕೆ ಮಾಡುವಂತೆ ಸಲಹೆ ನೀಡುತ್ತೇನೆ ಎಂದು ಜಯ ಶಾ ಹೇಳಿಕೆ ನೀಡಿದ್ದರು.
ಜಯ್ ಶಾ ಈ ಹೇಳಿಕೆ ನೀಡಿದ ಬೆನ್ನಲ್ಲೆ ಪಾಕಿಸ್ತಾನ ತಂಡದ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ನೀವು ಏಷ್ಯಾ ಕಪ್ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಬರುವುದಿಲ್ಲವಾದರೆ, ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕ ದಿನ ವಿಶ್ವ ಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಇದನ್ನೂ ಓದಿ | Asia Cup | ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲ್ಲ, ಜಯ್ ಶಾ ಹೇಳಿಕೆಗೆ ಅಫ್ರಿದಿ ಕೆಂಡಾಮಂಡಲ