Site icon Vistara News

ಮ್ಯಾಕ್ಸ್​ವೆಲ್​ ಜಾಗದಲ್ಲಿ ಕೊಹ್ಲಿ ಇರುತ್ತಿದ್ದರೆ ಹೀಗೆ ಮಾಡುತ್ತಿದ್ದರು; ಗಂಭೀರ್​ ಕೊಂಕು ಮಾತು

Gautam Gambhir

ನವದೆಹಲಿ: ಅಫಘಾನಿಸ್ತಾನ(Australia vs Afghanistan) ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ ದ್ವೀಶತಕ ಬಾರಿಸಿದ ಮ್ಯಾಕ್ಸ್​ವೆಲ್(glenn maxwell)​ ಪರಾಕ್ರಮವನ್ನು ಗೌತಮ್​ ಗಂಭೀರ್(Gautam Gambhir)​ ಅವರು ಹಾಡಿ ಹೊಗಳಿದ್ದಾರೆ. ಇದೇ ವೇಳೆ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಯ(virat kohli) ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಟ್ವಿಟರ್​ ಎಕ್ಸ್​ನಲ್ಲಿ ಮ್ಯಾಕ್ಸ್​ವೆಲ್​ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಗಂಭಿರ್​, “ಇದೊಂದು ನಂಬಲು ಸಾಧ್ಯವಾಗದ ಇನಿಂಗ್ಸ್‌” ಎಂದು ಬರೆದುಕೊಂಡಿದ್ದಾರೆ. ಆದರೆ ಸ್ಟಾರ್​ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮ್ಯಾಕ್ಸ್‌ವೆಲ್‌ ಆಟವನ್ನು ವಿರಾಟ್‌ ಕೊಹ್ಲಿ ಆಟಕ್ಕೆ ಹೋಲಿಕೆ ಮಾಡಿ ಕೊಹ್ಲಿಯ ಬ್ಯಾಟಿಂಗ್​ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ.

ಕೊಹ್ಲಿ ಸಿಂಗಲ್ಸ್​ ತೆಗೆಯುತ್ತಿದ್ದರು

ಮ್ಯಾಕ್ಸ್​ವೆಲ್ ಜಾಗದಲ್ಲಿ ವಿರಾಟ್​ ಕೊಹ್ಲಿ ಅವರು ಇರುತ್ತಿದ್ದರೆ ಖಂಡಿತವಾಗಿಯೂ ಸಿಂಗಲ್ಸ್​ ರನ್​ ತೆಗೆಯುತ್ತಿದ್ದರು ಎಂದು ಹೇಳುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ನಿಧಾನಗತಿಯ ಬ್ಯಾಟಿಂಗ್‌ ಮಾಡಿದಕ್ಕೆ ಇಲ್ಲಿ ಟೀಕೆ ವ್ಯಕ್ತಪಡಿಸಿದರು. “ಒಂದು ವೇಳೆ ವಿರಾಟ್‌ ಕೊಹ್ಲಿ ಅವರು 195 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದರೆ, ಅವರು ದ್ವಿಶತಕ ಬಾರಿಸುವ ಸಲುವಾಗಿ ಸಿಂಗಲ್ಸ್‌ ತೆಗೆದುಕೊಳ್ಳುತ್ತಿದ್ದರು. ಆದರೆ, ಮ್ಯಾಕ್ಸ್‌ವೆಲ್‌ ಹಾಗೆ ಮಾಡಲಿಲ್ಲ. ಅವರು ಸಿಕ್ಸರ್‌ ಬಾರಿಸಿದರು. ಆದ್ದರಿಂದಲೇ ಅವರು ಉಳಿದವರಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡು. ಮ್ಯಾಕ್ಸ್‌ವೆಲ್‌ ವೈಯಕ್ತಿಕ ದಾಖಲೆಗಾಗಿ ಆಡುವ ಆಟಗಾರನಲ್ಲ” ಎಂದು ಹೇಳಿ ಕೊಹ್ಲಿಯನ್ನು ಕಡೆಗಣಿಸಿದರು.

ವಿರಾಟ್‌ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿ ಹೆಚ್ಚಾಗಿ ಸಿಂಗಲ್ಸ್‌ ಮತ್ತು ಡಬಲ್ಸ್‌ ರನ್‌ ಓಡುವ ಮೂಲಕ ಶತಕ ಬಾರಿಸಿದ್ದರು. ಅಲ್ಲದೆ ಶತಕಕ್ಕಾಗಿ 121 ಎಸೆತಗಳನ್ನು ಎದುರಿಸಿದ್ದರು. ಇದೇ ಕಾರಣಕ್ಕೆ ಗಂಭೀರ್‌ ಈ ಮಾತನ್ನು ಹೇಳಿದ್ದಾರೆ.

ಕೊಹ್ಲಿಯನ್ನು ʼಆಧುನಿಕ ಕ್ರಿಕೆಟ್​ನ ಅತ್ಯುತ್ತಮ ಫಿನಿಶರ್ʼ ಎಂದಿದ್ದ ಗಂಭೀರ್‌

ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ನಡೆಸಿದ್ದ ಕೊಹ್ಲಿ ಪ್ರದಶನಕ್ಕೆ ಗಂಭೀರ್‌ ಅವರು ಮೆಚ್ಚುಗೆ ಸೂಚಿಸಿದ್ದರು. ಕೊಹ್ಲಿಯನ್ನು ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ಫಿನಿಶರ್ ಎಂದಿದ್ದರು.

“ಆಧುನಿಕ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿನಿಶರ್ ಆಗಿದ್ದಾರೆ. ಅವರನ್ನು ಬಿಟ್ಟು ಈ ರೀತಿಯ ಫಿನಿಶರ್ ಕ್ರಿಕೆಟ್​ನಲ್ಲಿ ಸದ್ಯ ಮತ್ತೊಬ್ಬರಿಲ್ಲ. ವಿರಾಟ್​ ಯಾವುವೇ ಕ್ರಮಂಕದಲ್ಲಿ ಬ್ಯಾಟ್​ ಬೀಸಿದರೂ ಅವರಿಗೆ ಪಂದ್ಯವನ್ನು ಫಿನಿಶಿಂಗ್​ ಮಾಡುವ ಸಾಮರ್ಥ್ಯವಿದೆ. ಎಲ್ಲ ವಿಕೆಟ್​ ಆಧಾರದಲ್ಲೂ ಕೊಹ್ಲಿ ಚೇಸಿಂಗ್ ಮಾಸ್ಟರ್ ಆಗಿದ್ದಾರೆ” ಎಂದು ಗೌತಮ್ ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದು ಕೊಹ್ಲಿ ಅಭಿಮಾನಿಗಳಿಗೂ ಅಚ್ಚರಿಯಾಗಿತ್ತು. ಆದರೆ ಈಗ ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ Glenn Maxwell : ದ್ವಿಶತಕದ ದಾಖಲೆಯ ಶೂರ ಮ್ಯಾಕ್ಸ್​ವೆಲ್​ ವಿಶ್ವ ಕಪ್​ನಿಂದ ಔಟ್​?

ಐಪಿಎಲ್​ನಿಂದ ಆರಂಭವಾದ ಮುನಿಸು

ವಿರಾಟ್​ ಕೊಹ್ಲಿ ಅವರ ಆರಂಭಿಕ ಕ್ರಿಕೆಟ್​ ಜರ್ನಿಯಲ್ಲಿ ಗಂಭೀರ್​ ಅವರು ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಗೆ ನೀಡಿ ಕ್ರೀಡಾಸ್ಫೂರ್ತಿ ಮರೆದ್ದರು. ಅಲ್ಲದೆ ಯುವ ಕ್ರಿಕೆಟಿಗರಿಗೆ ಈ ರೀತಿಯ ಗೌರವ ನೀಡಿದರೆ ಅವರು ಮುಂದೆ ಶ್ರೇಷ್ಠ ಕ್ರಿಕೆಟ್​ ಆಟಗಾರರಾಗಿ ಬೆಳೆಯುತ್ತಾರೆ ಎಂದಿದ್ದರು. ಆದರೆ ಆ ಬಳಿಕ ಉಭಯ ಆಟಗಾರರು ಹಾವು ಮುಂಗುಸಿಯಂತೆ ಕಚ್ಚಾಡುತ್ತಾ ದ್ವೇಷ ಸಾಧಿಸಿದರು.

ಇದನ್ನೂ ಓದಿ ‘ಇದು ನಿಮ್ಮಿಂದ ಮಾತ್ರ ಸಾಧ್ಯ’; ಮ್ಯಾಕ್ಸ್​ವೆಲ್​ಗೆ ಕಿಂಗ್​ ಕೊಹ್ಲಿಯಿಂದ ಮೆಚ್ಚುಗೆ

ಇದಕ್ಕೆ ಕಾರಣ 2013ರ ಐಪಿಎಲ್​ನಲ್ಲಿ ನಡೆದ ಒಂದು ಘಟನೆ. ಗಂಭೀರ್​ ಅವರು ಕೊಹ್ಲಿ ಔಟಾದಾಗ ಸಂಭ್ರಮಿಸಿದ್ದನ್ನು ಕಂಡ ಕೊಹ್ಲಿ ಸಿಟ್ಟಿನಲ್ಲಿ ಗಂಭೀರ್​ಗೆ ಏನೋ ಹೇಳಿದ್ದರು. ಬಳಿಕ ವಾಗ್ವಾದ ನಡೆದು ಸಹ ಆಟಗಾರರು ಮತ್ತು ಅಂಪೈರ್​ ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ತಿಳಿಗೊಳಿದ್ದರು. ಇಲ್ಲಿಂದ ಆರಂಭಗೊಂಡ ಇಬರಿಬ್ಬರ ಮುನಿಸು ಈಗಾಗಲೂ ಮುಂದುವರಿದಿದೆ. ಇದೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿಯೂ ಕೊಹ್ಲಿ ಮತ್ತು ಗಂಭೀರ್​ ಕಿತ್ತಾಡ ನಡೆಸಿದ್ದರು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಉಭಯ ಆಟಗಾರರ ಜಗಳ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version