ನೇಪಿಯರ್ : ಭಾರತ ಹಾಗೂ ನ್ಯೂಜಿಲೆಂಡ್ (INDvsNZ) ನಡುವಿನ ಟಿ೨೦ ಸರಣಿಯ ಮೂರನೇ ಹಾಗೂ ಕೊನೇ ಪಂದ್ಯ ಮಂಗಳವಾರ ನಡೆಯಲಿದ್ದು, ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಸೂರ್ಯಕುಮಾರ್ ಯಾದವ್ ಹಿಂದಿನ ಪಂದ್ಯದಂತೆ ಸಿಡಿದೆದ್ದರೆ ಭಾರತ ತಂಡಕ್ಕೆ ಗೆಲುವು ಸುಲಭ ಎಂಬುದು ಅಭಿಮಾನಿಗಳ ನಿರೀಕ್ಷೆ.
ನೇಪಿಯರ್‌ನ ಮೆಕ್‌ಲೀನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಪಂದ್ಯ ಆಯೋಜನೆಗೊಂಡಿದ್ದು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ ೧೨ ಗಂಟೆಗೆ ಪಂದ್ಯ ಶುರುವಾಗಲಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಈ ಪಂದ್ಯವನ್ನೂ ಗೆದ್ದ ಸರಣಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ.
ವೆಲ್ಲಿಂಗ್ಟನ್‌ನಲ್ಲಿ ಆಯೋಜನೆಗೊಂಡಿದ್ದ ಮೊದಲ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ ಭಾರತ ತಂಡ ೬೫ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದೀಗ ಸರಣಿಯಲ್ಲಿ ಭಾರತ ತಂಡ ೧-೦ ಅಂತರದ ಮುನ್ನಡೆಯನ್ನು ಪಡೆದುಕೊಂಡಿದೆ. ಹೀಗಾಗಿ ಮಂಗಳವಾರದ ಪಂದ್ಯಕ್ಕೆ ಹೆಚ್ಚಿನ ಕಿಮ್ಮತ್ತು ಬಂದಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡ ಗೆದ್ದರೆ ಸರಣಿ ೧-೧ ಅಂತರದಿಂದ ಸಮಬಲಗೊಳ್ಳಲಿದೆ.
ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಜೇಯ ೧೧೧ ರನ್ ಬಾರಿಸಿದ್ದರೆ, ತಮ್ಮ ಸ್ಪಿನ್ ಮೋಡಿಯನ್ನು ಪ್ರದರ್ಶಿಸಿದ್ದ ದೀಪಕ್ ಹೂಡಾ ೧೦ ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಸಂಜುಗೆ ಅವಕಾಶ ?
ರಿಷಭ್ ಪಂತ್ ಸತತವಾಗಿ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಹೀಗಾಗಿ ಮೂರನೇ ಪಂದ್ಯದ ಆಡುವ ಬಳಗದಲ್ಲಿ ಅವರು ಇರಬಹುದು ಎಂದು ಅಂದಾಜಿಸಲಾಗಿದೆ. ರಿಷಭ್ ಪಂತ್ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಜತೆ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಅವರು ೬ ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಅವರನ್ನು ಬೆಂಚು ಕಾಯಿಸುವ ಸಾಧ್ಯತೆಗಳೇ ಹೆಚ್ಚಿವೆ. ಆದರೆ, ಪ್ಲೇಯಿಂಗ್ ಇಲೆವೆನ್ ಅಚ್ಚರಿಯಾಗಿದ್ದ ಹೊರತಾಗಿಯೂ ಭಾರತ ತಂಡ ಅಮೋಘ ಜಯ ಸಾಧಿಸಿರುವ ಕಾರಣ ಮೂರನೇ ಪಂದ್ಯಕ್ಕೆ ಅದೇ ಆಟಗಾರರನ್ನು ಕಣಕ್ಕೆ ಇಳಿಸಬಹುದು ಎನ್ನಲಾಗಿದೆ.
ಕೇನ್ ಇಲ್ಲ
ಅತ್ತ ನ್ಯೂಜಿಲೆಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯೊಂದಕ್ಕೆ ಚಿಕಿತ್ಸೆ ಪಡೆಯಲು ಮುಂದಾಗಿರುವ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಅವರ ಬದಲಿಗೆ ಮಾರ್ಕ್ ಚಾಪ್ಮನ್ ತಂಡ ಸೇರಿಕೊಳ್ಳಲಿದ್ದಾರೆ ಹಾಗೂ ವೇಗದ ಬೌಲರ್ ಟಿಮ್ ಸೌಥೀ ತಂಡವನ್ನು ಮುನ್ನಡೆಸಲಿದ್ದಾರೆ.
ಸಂಭಾವ್ಯ ತಂಡಗಳು
ಭಾರತ:ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್‌ಗಳು), ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್: ಟಿಮ್ ಸೌಥೀ(ನಾಯಕ), ಮೈಕಲ್ ಬ್ರೇಸ್‌ವೆಲ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್, ಫಿನ್ ಆಲೆನ್, ಡೆವೋನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗ್ಯೂಸನ್, ಆಡಮ್ ಮಿಲ್ನೆ, ಇಶ್ ಸೋಧಿ, ಬ್ಲೈರ್ ಟಿಕ್ನರ್. ಮಾರ್ಕ್ ಚಾಂಪ್ಮನ್.
ಇದನ್ನೂ ಓದಿ | Team India | ಅಲ್ಲಿಗೂ ಬರುವೆ ಒಂದು ದಿನ ಎಂದ ಸೂರ್ಯಕುಮಾರ್; ಎಲ್ಲಿಗೆ ಅದು?