Site icon Vistara News

Asia Cup | ಕೊಹ್ಲಿ ಪಾಕ್‌ ವಿರುದ್ಧ ಅರ್ಧ ಶತಕ ಬಾರಿಸಿದರೆ ಎಲ್ಲರೂ ಬಾಯ್ಮುಚ್ಚುತ್ತಾರೆ ಎಂದ ಶಾಸ್ತ್ರಿ

Asia Cup

ಮುಂಬಯಿ : ಎಲ್ಲರೂ ಈಗ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಪ್ರದರ್ಶನದ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ. ೨೦೧೯ರಿಂದ ಒಂದೇ ಒಂದು ಶತಕ ಬಾರಿಸಿಲ್ಲ, ಉತ್ತಮ ಫಾರ್ಮ್‌ನಲ್ಲಿ ಇಲ್ಲ ಎಂದೆಲ್ಲ ತೆಗಳುತ್ತಿದ್ದಾರೆ. ಆದರೆ, ಟೀಮ್‌ ಇಂಡಿಯಾದ ಮಾಜಿ ಕೋಚ್‌ ರವಿ ಶಾಸ್ತ್ರಿ ಮಾತ್ರ ಕೊಹ್ಲಿಯನ್ನು ಸಮರ್ಥನೆ ಮಾಡುತ್ತಲೇ ಇದ್ದಾರೆ. ಒಂದಲ್ಲ ಒಂದು ದಿನ ಫಾರ್ಮ್‌ಗೆ ಮರಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದುವರಿದ ಅವರು ಮುಂದಿನ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಎಲ್ಲರ ಬಾಯ್ಮುಚ್ಚಿಸುತ್ತಾರೆ ಎಂದು ಹೇಳಿದ್ದಾರೆ.

ಮುಂದಿನ ಶನಿವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾ ಕಪ್‌ ಪಂದ್ಯ ನಡೆಯಲಿದೆ. ಎರಡೂ ತಂಡಗಳಿಗೆ ಅದು ಏಷ್ಯಾ ಕಪ್‌ನಲ್ಲಿ ಮೊದಲ ಪಂದ್ಯ. ಅದರೆ, ವಿರಾಟ್‌ ಕೊಹ್ಲಿಗೆ ಅದು ೧೦೦ನೇ ಟಿ೨೦ ಪಂದ್ಯ. ಅದನ್ನು ಸ್ಮರಣೀಯವಾಗಿಸಲು ಕೊಹ್ಲಿ ಸತತವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಅಂತೆಯೇ ರವಿ ಶಾಸ್ತ್ರಿಯೂ ಅದೇ ವಿಶ್ವಾಸ ವ್ಯಕ್ತಪಡಿಸಿದ್ದು, ಅರ್ಧ ಶತಕ ಬಾರಿಸುವುದು ಖಚಿತ ಎಂದು ಹೇಳಿದ್ದಾರೆ.

“ನಾನು ವಿರಾಟ್‌ ಕೊಹ್ಲಿ ಜತೆ ಮಾತನಾಡಿದ್ದೇನೆ. ಹಾಗೆಂದು ನಾನು ಹೇಳುತ್ತಿರುವುದು ರಾಕೆಟ್‌ ವಿಜ್ಞಾನ ಅಲ್ಲ. ಎಲ್ಲ ಆಟಗಾರರೂ ಇಂಥದ್ದೊಂದು ಪರಿಸ್ಥಿತಿಯನ್ನು ಎದುರಿಸುತ್ತಾರೆ. ಎಲ್ಲ ಆಟಗಾರರು ಕೆಟ್ಟ ದಿನಗಳನ್ನು ಎದುರಿಸಿ ಬಳಿಕ ಫಾರ್ಮ್‌ ಕಂಡುಕೊಂಡಿದ್ದಾರೆ. ಅಂತೆಯೇ ಕೊಹ್ಲಿಯೂ ಕೆಟ್ಟ ದಿನಗಳನ್ನು ಎದುರಿಸಿದ್ದಾರೆ. ಇದೀಗ ಅವರಿಗೆ ತಿರುಗಿ ಬೀಳುವ ಸಮಯ,” ಎಂದು ಶಾಸ್ತ್ರಿ ನುಡಿದಿದ್ದಾರೆ.

“ವಿರಾಟ್ ಕೊಹ್ಲಿ ಸ್ಥಿತಪ್ರಜ್ಞರಾಗಿ ಅಡಲು ಇಳಿಯಲಿದ್ದಾರೆ. ಅಂತೆಯೇ ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಟೂರ್ನಿಯ ಇತರ ಭಾಗದಲ್ಲಿ ಎಲ್ಲರೂ ಬಾಯ್ಮುಚ್ಚಿ ಕುಳಿತುಕೊಳ್ಳುವಂತೆ ಮಾಡುತ್ತಾರೆ,” ಎಂದು ರವಿ ಶಾಸ್ತ್ರಿ ನುಡಿದರು.

ಇದನ್ನೂ ಓದಿ | Virat Kohli | ಸ್ಕೂಟರ್ ಹತ್ತಿ ಮುಂಬಯಿಯಲ್ಲಿ ಜಾಲಿ ರೈಡ್‌ ಹೋದ ವಿರಾಟ್‌ ಕೊಹ್ಲಿ- ಅನುಷ್ಕಾ ದಂಪತಿ

Exit mobile version