ರಾಂಚಿ: ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ t20) ಮೊದಲ ಪಂದ್ಯದಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅಬ್ಬರದ ಪ್ರದರ್ಶನ ನೀಡಿದ್ದಾರೆ. 28 ಎಸೆತಗಳಲ್ಲಿ 50 ರನ್ ಬಾರಿಸುವ ಜತೆಗೆ ಬೌಲಿಂಗ್ನಲ್ಲೂ 2 ಪ್ರಮುಖ ವಿಕೆಟ್ಗಳನ್ನು ಕಬಳಿಸಿದ್ದರು. ಹೀಗಾಗಿ ತಮಿಳುನಾಡು (Tamilnadu) ಮೂಲದ ಈ ಆಟಗಾರ ದಿನ ಹೈಲೈಟ್ ಎನಿಸಿಕೊಂಡರು. ದಿನದ ತಮ್ಮ ಸಾಧನೆಯ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ ಕೂಡ. ಇದೇ ವೇಳೆ ಅವರು ಬಿರಿಯಾನಿ ಹಾಗೂ ರೆಸ್ಟೋರೆಂಟ್ನ ಹೋಲಿಕೆಯೊಂದನ್ನು ಮಾಡುವ ಮೂಲಕ ಅನಿರೀಕ್ಷಿತ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರ ಬಾಯಿ ಮುಚ್ಚಿಸಿದ್ದಾರೆ.
ಮೊದಲ ದಿನದ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳ (Top Order Batter) ವೈಫಲ್ಯವೇ ಸೋಲಿಗೆ ಕಾರಣವಾಯಿತು. ಈ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ, ನಾಯಕ ಹಾರ್ದಿಕ್ ಪಾಂಡ್ಯ , ರಾಂಚಿಯ ಪಿಚ್ ನಿರೀಕ್ಷೆಗಿಂತ ಅಧಿಕ ತಿರುವು ಪಡೆದುಕೊಳ್ಳುತ್ತಿದ್ದ ಕಾರಣ ಬ್ಯಾಟಿಂಗ್ ಕಷ್ಟವಾಯಿತು ಎಂದು ಹೇಳಿದ್ದಾರೆ. ಆದರೆ, ಪತ್ರಕರ್ತರೊಬ್ಬರು ಮಾಧ್ಯಮ ಗೋಷ್ಠಿಯಲ್ಲಿ ಅಗ್ರ ಕ್ರಮಾಂಕ ಬ್ಯಾಟಿಂಗ್ ವೈಫಲ್ಯದ ಬಗ್ಗೆ ವಾಷಿಂಗ್ಟನ್ ಸುಂದರ್ ಬಳಿ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಅವರೆಲ್ಲರನ್ನೂ ಮುಂದಿನ ಪಂದ್ಯಕ್ಕೆ ಬದಲಾಯಿಸಬೇಕಾ ಎಂದು ಅನಿರೀಕ್ಷಿತ ಪ್ರಶ್ನೆ ಹಾಕಿದ್ದಾರೆ.
ಪತ್ರಕರ್ತನ ಆಘಾತಕಾರಿ ಪ್ರಶ್ನೆಗೆ ಉತ್ತರಿಸಿದ ವಾಷಿಂಗ್ಟನ್ ಸುಂದರ್, ನೀವು ಒಂದು ಹೋಟೆಲ್ಗೆ ಹೋದಾಗ ನಿಮ್ಮಿಷ್ಟದ ಬಿರಿಯಾನಿ ನಿಮಗೆ ಅಲ್ಲಿ ಸಿಗಲಿಲ್ಲ ಎಂದು ಅಂದುಕೊಳ್ಳೋಣ. ಆಗ ನೀವು ಆ ಹೋಟೆಲ್ ಅನ್ನೇ ಬದಲಾಯಿಸುತ್ತೀರಾ. ಅಂತೆಯೇ ಒಂದು ದಿನದ ಮಟ್ಟಿಗೆ ಕೆಲವು ಬ್ಯಾಟ್ಸ್ಮನ್ಗಳು (batter) ವೈಫಲ್ಯ ಕಂಡರೆ ಅವರನ್ನು ಮುಂದಿನ ಪಂದ್ಯಕ್ಕೆ ಬದಲಾಯಿಸಬೇಕು ಎಂಬದು ತಪ್ಪು. ಕ್ರಿಕೆಟ್ನಲ್ಲಿ ಇವೆಲ್ಲ ಸರ್ವೇ ಸಾಮಾನ್ಯ. ಕೆಲವೊಂದು ದಿನ ಕೆಲವು ಬ್ಯಾಟರ್ಗಳು ವೈಫಲ್ಯ ಕಾಣುತ್ತಾರೆ. ಅದಕ್ಕೆಲ್ಲ ಬದಲಾವಣೆ ಮಾಡಲು ಹೋಗುವುದು ಕಷ್ಟ ಎಂದು ಹೇಳಿದರು.
ಇದನ್ನೂ ಓದಿ | INDvsNZ T20 | ವಾಷಿಂಗ್ಟನ್ ಸುಂದರ್ ಹಿಡಿದ ಅದ್ಭುತ ಕ್ಯಾಚ್ಗೆ ಶಹಬ್ಬಾಸ್ ಎಂದ ಕ್ರಿಕೆಟ್ ಅಭಿಮಾನಿಗಳು
ಇದೇ ವೇಳೆ ಅವರು ಕೊನೇ ಓವರ್ನಲ್ಲಿ ನೋ ಬಾಲ್ ಸಮೇತ 27 ರನ್ ನೀಡಿದ ಅರ್ಶ್ದೀಪ್ ಸಿಂಗ್ ಅವರನ್ನೂ ಬೆಂಬಲಿಸಿದರು. ಅರ್ಶ್ದೀಪ್ ಸಿಂಗ್ ಐಪಿಎಲ್ ಹಾಗೂ ಭಾರತ ತಂಡದ ಪರ ಸಾಕಷ್ಟು ವಿಕೆಟ್ಗಳನ್ನು ಉರುಳಿಸಿದ್ದಾರೆ. ನಾವೆಲ್ಲರೂ ಮನುಷ್ಯರು. ತಪ್ಪುಗಳು ನಡೆಯುತ್ತವೆ. ಎದುರಾಳಿ ತಂಡದ ಆಟಗಾರರು ಗುಣಮಟ್ಟ ಹೊಂದಿರುತ್ತಾರೆ. ಹೀಗಾಗಿ ಸ್ಪರ್ಧೆ ಹೆಚ್ಚಿರುತ್ತದೆ ಎಂದು ಹೇಳಿದರು.