ಮುಂಬಯಿ: ಭಾರತದ ಆಟೋಮೊಬೈಲ್ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಎಲ್ಲ ಪ್ರಯಾಣಿಕ ವಾಹನಗಳ ಬೆಲೆಯನ್ನು ಮೇ 1ರಿಂದ ಏರಿಕೆ ಮಾಡುವುದಾಗಿ ಘೋಷಿಸಿದೆ. ಸರಾಸರಿ 0.6ರಷ್ಟು ಬೆಲೆ ಏರಿಕೆ ಕಾಣಲಿದೆ ಎಂದು ಹೇಳಲಾಗಿದ್ದು, ವೇರಿಯೆಂಟ್ ಹಾಗೂ ಮಾಡೆಲ್ ಆಧಾರದಲ್ಲಿ ಬೆಲೆ ಹೆಚ್ಚಳ ನಿರ್ಧಾರವಾಗಲಿದೆ. ಭಾರತ ಸರಕಾರ ವಾಹನಗಳ ಪರಿಸರ ಮಾಲಿನ್ಯ ಮಾನದಂಡವನ್ನು ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ತನ್ನ ಎಂಜಿನ್ ಸೇರಿದಂತೆ ಕೆಲವೊಂದು ತಾಂತ್ರಿಕ ಬದಲಾವಣೆ ಮಾಡಿಕೊಂಡಿದೆ. ಇದರಿಂದಾಗಿ ಕಾರುಗಳ ಉತ್ಪಾದನಾ ವೆಚ್ಚ ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ. ಹೆಚ್ಚುವರಿ ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸುವ ಉದ್ದೇಶದಿಂದ ಬೆಲೆ ಏರಿಕೆ ಮಾಡಲು ಕಂಪನಿ ನಿರ್ಧರಿಸಿದೆ.
ಟಾಟಾ ಕಂಪನಿಯು ತನ್ನ ಪಂಚ್, ಆಲ್ಟ್ರೋಜ್, ಟಿಯಾಗೊ ಹಾಗೂ ಟಿಗೋರ್ ಕಾರುಗಳ ಬೆಲೆ ಏರಿಕೆ ಮಾಡಿದೆ. ಈ ಕಾರುಗಳ ಎಂಜಿನ್ನಲ್ಲಿ ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ತಾಂತ್ರಿಕ ಮಾರ್ಪಾಟುಗಳನ್ನು ಮಾಡಲಾಗಿದೆ. ಅದಕ್ಕಾಗಿ ಹೆಚ್ಚುವರಿ ಬಿಡಿಭಾಗಗಳನ್ನು ಬಳಸಿಕೊಂಡಿದೆ. ಆ ವೆಚ್ಚವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಕಾರಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರಯಾಣಿಕ ವಾಹನ ಮಾತ್ರವಲ್ಲದೆ ಟಾಟಾ ಮೋಟಾರ್ಸ್ ತನ್ನ ಸರಕು ಸಾಗಣೆ ವಾಹನದ ಬೆಲೆಯನ್ನೂ ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ. ಇದೇ ವೇಳೆ ಟಾಟಾ ಮೋಟಾರ್ಸ್ ಸಿಎನ್ಜಿ ಆವೃತ್ತಿಯ ಪಂಚ್ ಹಾಗೂ ಆಲ್ಟ್ರೋಜ್ ಕಾರನ್ನು ಮಾರುಕಟ್ಟೆಗೆ ಬಿಡುವೆ ಯೋಜನೆ ರೂಪಿಸಿಕೊಂಡಿದೆ.
ಇದನ್ನೂ ಓದಿ : Tata Motors : ಕಾರುಗಳ ಎಂಜಿನ್ಗಳನ್ನು ಅಪ್ಗ್ರೇಡ್ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಈ ಎರಡೂ ಸಿಎನ್ಜಿ ಕಾರುಗಳನ್ನು 2023ರ ಆಟೋ ಎಕ್ಸ್ಪೊದಲ್ಲಿ ಪ್ರದರ್ಶನಕ್ಕೆ ಇಟ್ಟಿತ್ತು. ಕಂಪನಿಯು ಟಿಯಾಗೊ ಸಿಎನ್ಜಿ ಹಾಗೂ ಟಿಗೋರ್ ಸಿಎನ್ಜಿ ಮೂಲಕ ಈ ಸಿಎನ್ಜಿ ಸೆಗ್ಮೆಂಟ್ಗೆ ಪ್ರವೇಶ ಪಡೆದುಕೊಂಡಿತ್ತು. ಇದೇ ವೇಳೆ ಸಿಎನ್ಜಿ ಕಾರುಗಳು ಎರಡು ಡ್ಯುಯಲ್ ಸಿಲಿಂಡರ್ ರೂಪದಲ್ಲಿ ಬರಲಿದೆ. ಇದರಿಂದ ಬೂಟ್ಸ್ಪೇಸ್ಗೆ ತಕ್ಕದಾಗಿ ಸಿಎನ್ಜಿ ಸಿಲಿಂಡರ್ಗಳನ್ನು ಅಳವಡಿಸಲು ಸಾಧ್ಯವಾಗಲಿದೆ. ಕಂಪನಿ ಹೇಳಿಕೆ ಪ್ರಕಾರ, ಅಳವಡಿಸಲಾಗುವ ಟ್ಯಾಂಕ್ಗಳ ತಲಾ 30 ಲೀಟರ್ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಬೂಟ್ ಸ್ಪೇಸ್ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಪ್ರಸ್ತುತ ಇರುವ ಪೆಟ್ರೋಲ್ನ ಪಂಚ್ ಹಾಗೂ ಆಲ್ಟ್ರೋಜ್ ತಲಾ 345 ಹಾಗೂ 366 ಲೀಟರ್ ಬೂಟ್ದ ಸ್ಪೇಸ್ ಹೊಂದಿದೆ.
ಎಂಜಿನ್ ಸಾಮರ್ಥ್ಯ ಏನು?
ಟಾಟಾ ಆಲ್ಟ್ರೋಜ್ ಹಾಗೂ ಪಂಚ್ನಲ್ಲಿ 1.2 ಲೀಟರ್ನ 3 ಸಿಲಿಂಡರ್ ಎಂಜಿನ್ ಇದೆ. ಇದು 86 ಪಿಎಸ್ ಪವರ್ ಹಾಗೂ 113 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರ ಸಿಎನ್ಜಿ ಮೋಡ್ನ ಕಾರು 77 ಪಿಎಸ್ ಪವರ್ ಹಾಗೂ 93 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಸಿಎನ್ಜಿ ಎಂಜಿನ್ಗಳು 5 ಸ್ಪೀಡ್ನ ಮ್ಯಾನುಯಲ್ ಗೇರ್ಬಾಕ್ಸ್ ಹೊಂದಿದೆ. ಈ ಕಾರುಗಳು 26ರಿಂದ 27 ಕಿಲೋಮೀಟರ್ ಮೈಲೇಜ್ ನೀಡಲಿದೆ.