ಇಂದೋರ್: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ (INDvsAUS) ತಂಡಗಳ ನಡುವೆ ಮೂರನೇ ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದೆ. ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಹಣಾಹಣಿ ಆಯೋಜನೆಗೊಂಡಿದೆ. ಮೊದಲೆರಡು ಪಂದ್ಯಗಳಂತೆ ಈ ಪಂದ್ಯಕ್ಕೆ ಮುನ್ನವೂ ಇತ್ತಂಡಗಳ ಆಟಗಾರರ ನಡುವೆ ಮಾತಿನ ಸರಣಿ ಶುರುವಾಗಿದೆ. ಅಂತೆಯೇ ಭಾರತ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಪಿಚ್ಗೆ ಪೂರಕವಾಗಿ ಆಡುವುದೇ ಗೆಲುವಿನ ಸೂತ್ರ. ಪಿಚ್ ಸರಿ ಇಲ್ಲ ಎಂದು ದೂರುವುದರಿಂದ ಪ್ರಯೋಜನ ಇಲ್ಲ ಎಂದು ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ.
ಭಾರತದಲ್ಲಿ ಟೆಸ್ಟ್ ಪಂದ್ಯಗಳಿಗಾಗಿ ಸಿದ್ಧಪಡಿಸುವ ಪಿಚ್ಗಳು ಸ್ಪಿನ್ಗೆ ಪೂರಕವಾಗಿರುತ್ತದೆ. ಪಿಚ್ನಲ್ಲಿ ಬಿರುಕುಗಳು ಹೆಚ್ಚಿರುವ ಕಾರಣ ಚೆಂಡು ಮಿತಿ ಮೀರಿ ತಿರುವು ಪಡೆಯುತ್ತದೆ. ವಿದೇಶಿ ಬ್ಯಾಟರ್ಗಳಿಗೆ ಇಲ್ಲಿ ಆಡುವುದು ಕಷ್ಟವಾಗುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ದೂರಿದ್ದರು. ಅದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ತಂಡವು ನಾಗ್ಪುರ ಹಾಗೂ ನವದೆಹಲಿಯಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಕನಿಷ್ಠ ಮೊತ್ತಕ್ಕೆ ಮುಗ್ಗರಿಸಿತ್ತು.
ಇದನ್ನೂ ಓದಿ : Ravindra Jadeja : ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜಾ, ಆರ್ ಅಶ್ವಿನ್
ಈ ಕುರಿತು ಮಾತನಾಡಿದ ಆರ್. ಆಶ್ವಿನ್, ಪಿಚ್ ಬಗ್ಗೆ ಪ್ರತಿರೋಧ ತೋರುವುದು ಸರಿಯಲ್ಲ. ಅದು ಯಾವ ರೀತಿ ಇದೆಯೊ ಅದೇ ರೀತಿಯಲ್ಲಿ ಆಡಬೇಕು. ಎರಡೂ ಪಂದ್ಯಗಳಲ್ಲಿ ನಮ್ಮ ತಂಡ ದೊಡ್ಡ ಮಟ್ಟದ ಅಂತರವನ್ನೇನೂ ಗಳಿಸಿಕೊಂಡಿರಲಿಲ್ಲ. ಆದರೆ, ಅಗತ್ಯ ಸಂದರ್ಭದಲ್ಲಿ ನಮ್ಮ ತಂಡದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾನು ಪಿಚ್ ಹೇಗಿದೆಯೋ ಆದೇ ರೀತಿ ನಾವು ಆಡಿದ್ದೇವೆ. ಹೀಗಾಗಿ ಪಂದ್ಯ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.