ಮುಂಬಯಿ: ನೂರು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಭಾರತದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ (Indian Cricket Team) ಆಯ್ಕೆಯಾಗುವುದು ಸುಲಭದ ಮಾತಲ್ಲ. ಕ್ರಿಕೆಟ್ ಕೌಶಲ ಹಾಗೂ ಅದೃಷ್ಟ ಎರಡೂ ಜತೆಗಿರಬೇಕು. ಇನ್ನು ಮುಂದೆ ಇವರೆಡು ಮಾತ್ರ ಸಾಲುವುದಿಲ್ಲ. ದೈಹಿಕ ಸಾಮರ್ಥ್ಯ (ಫಿಟ್ನೆಸ್) ಪೂರ್ಣ ಪ್ರಮಾಣದಲ್ಲಿರಬೇಕು. ಅಂದರೆ ಕಂಪ್ಯೂಟರಿಕೃತ ಫಿಟ್ನೆಸ್ ಮಾನದಂಡಗಳನ್ನು ಪೂರೈಸಿರಬೇಕು. ಗರಿಷ್ಠ ಅಂಕಗಳನ್ನು ಪಡೆದರೆ ಮಾತ್ರ ಟೀಮ್ ಇಂಡಿಯಾದ ಬಾಗಿಲು ತೆರೆಯುತ್ತದೆ. ಇಲ್ಲದಿದ್ದರೆ ಕ್ಲೋಸ್.
ಭಾನುವಾರ ಬಿಸಿಸಿಐ ಅಧಿಕಾರಿಗಳು ಮುಂಬಯಿಯಲ್ಲಿ ಭಾರತ ಕ್ರಿಕೆಟ್ ತಂಡದ ಪ್ರದರ್ಶನದ ಪರಾಮರ್ಶೆ ಸಭೆ ನಡೆಸಿದ್ದಾರೆ. ಈ ವೇಳೆ ಆಟಗಾರರ ಗಾಯದ ಸಮಸ್ಯೆ ಹಾಗೂ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ತಂಡಕ್ಕೆ ಸೇರಬೇಕಾದರೆ ಎರಡು ಪರೀಕ್ಷೆಗಳನ್ನು ಕಡ್ಡಾಯ ಮಾಡಲಾಗಿದೆ. ಅದರಲ್ಲೊಂದು ಪರೀಕ್ಷೆ ಈ ಹಿಂದೆಯೂ ಇತ್ತು. ಆದರೆ, ಕೆಲವೊಂದು ವಿನಾಯಿತಿಗಳನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ಅದು ಸಾಧ್ಯವಿಲ್ಲ. ಎರಡೂ ಪರೀಕ್ಷೆಗಳಲ್ಲಿ ನಿಗದಿಪಡಿಸಿದ ಅಂಕ ಪಡೆಯಲೇಬೇಕು.
ಮೊದಲ ಪರೀಕ್ಷೆ ಯೊಯೊ ಟೆಸ್ಟ್. 24 ಹಂತಗಳಲ್ಲಿ ಆಟಗಾರರ ದೈಹಿಕ ಸಾಮರ್ಥ್ಯವನ್ನು ಇಲ್ಲಿ ಪರಿಕ್ಷೆ ಮಾಡಲಾಗುತ್ತದೆ. ನಿಗದಿಪಡಿಸಿದ ದೂರವನ್ನು ಓಡಿ ವಾಪಸ್ ಅದೇ ಜಾಗಕ್ಕೆ ಬರುವುದೇ ಪರೀಕ್ಷೆಯ ಮೂಲ ಸೂತ್ರ. ಆಟಗಾರನೊಬ್ಬರ ಪ್ರತಿಯೊಂದು ಹಂತದಲ್ಲಿ 20+20= 40 ಮೀಟರ್ ಅಂತರವನ್ನು ಓಡಿ ವಾಪಸ್ ಬರುವ ಸಮಯವನ್ನು ಪರಿಗಣನೆ ಮಾಡಲಾಗುತ್ತದೆ. ಆರಂಭದಲ್ಲಿ ನಿಧಾನವಾಗಿ ಓಡಿಸಿ ಹಂತ ದಾಟುತ್ತಿದ್ದ ಹಾಗೆ ಓಟದ ವೇಗವನ್ನು ಹೆಚ್ಚಿಸಲಾಗುತ್ತದೆ. ಕೊನೆಯಲ್ಲಿ ಕಂಪ್ಯೂರಿಕೃತ ಲೆಕ್ಕಚಾರದ ಮೂಲಕ ಫಲಿತಾಂಶ ಪಡೆಯಲಾಗುತ್ತದೆ. ಕ್ರಿಕೆಟಿಗರು ಕನಿಷ್ಠ ಪಕ್ಷ 16.1 ಅಂಕ ಗಳಿಸದೇ ಹೋದರೆ ಅವಕಾಶ ಸಿಗದು. ಇಲ್ಲಿ ಓಟಕ್ಕಿಂತಲೂ ಮಿಗಿಲಾಗಿ ಓಡಿ ಬಂದ ಬಳಿಕ ಸುಧಾರಿಕೊಳ್ಳುವ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಎರಡನೇ ಪರೀಕ್ಷೆ ಡೆಕ್ಸಾ (DEXA). ಡ್ಯುಯಲ್ ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೊಮೆಟ್ರಿ ಎಂದು ಕರೆಯಲಾಗುತ್ತದೆ. ದೇಹದ ಮೂಳೆಯ ಸಾಂದ್ರತೆಯನ್ನು ಪತ್ತೆ ಹಚ್ಚುವ ವೈಜ್ಞಾನಿಕ ವಿಧಾನವಾಗಿದೆ. ಯಾವುದೇ ವ್ಯಕ್ತಿಯ ಮೂಳೆ ಮುರಿತಕ್ಕೆ ಒಳಪಡುವ ಸಾಧ್ಯತೆ ಅಥವಾ ದುರ್ಬಲಗೊಂಡಿದ್ದರೆ ನಿಖರವಾಗಿ ಪತ್ತೆ ಹಚ್ಚುತ್ತದೆ. 10 ನಿಮಿಷದ ಅವಧಿಯ ಪರೀಕ್ಷೆಯಲ್ಲಿ ವರದಿಯನ್ನು ಪಡೆಯಲು ಸಾಧ್ಯ. ಆಟಗಾರರ ಗಾಯದ ಸಮಸ್ಯೆ ನಿಯಂತ್ರಣಕ್ಕೆ ಈ ಪರೀಕ್ಷೆಯನ್ನು ಬಳಸಲು ಬಿಸಿಸಿಐ ನಿರ್ಧರಿಸಿದೆ.
ಇದನ್ನೂ ಓದಿ | Team India | ಬಿಸಿಸಿಐ 20 ಕ್ರಿಕೆಟಿಗರ ಅಂತಿಮ ಪಟ್ಟಿ ಸಿದ್ಧಪಡಿಸಿದ್ದು ಯಾಕೆ? ಅವರ ಜವಾಬ್ದಾರಿಯೇನು?