Site icon Vistara News

Australian Open: ಆಸ್ಟ್ರೇಲಿಯಾ ಓಪನ್; ವಿಶ್ವದ ಅಗ್ರ ಶ್ರೇಯಾಂಕದ ಸ್ವಿಯಾಟೆಕ್‌, ಗಾಫ್​ಗೆ ಸೋಲಿನ ಆಘಾತ

iga swiatek 1

ಮೆಲ್ಬೋರ್ನ್​: ಆಸ್ಟ್ರೇಲಿಯಾ ಓಪನ್(Australian Open)​ ಟೆನಿಸ್​ ಟೂರ್ನಿಯಲ್ಲಿ ಭಾನುವಾರ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಈ ಬಾರಿಯ ಕೂಟದ ನೆಚ್ಚಿನ ಆಟಗಾರ್ತಿಯರಾಗಿ ಕಾಣಿಸಿಕೊಂಡಿದ್ದ ವಿಶ್ವದ ನಂ.1 ಶ್ರೇಯಾಂಕದ ಐಗಾ ಸ್ವಿಯಾಟೆಕ್‌ ಮತ್ತು ಅಮೆರಿಕದ ಕೊಕೊ ಗಾಫ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ.

ರಾಡ್‌ ಲೇವರ್ ಅರೆನಾದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸ್ವಿಯಾಟೆಕ್‌ ಅವರು 5-7, 2-6 ನೇರ ಸೆಟ್​ಗಳಿಂದ ವಿಂಬಲ್ಡನ್‌ ಚಾಂಪಿಯನ್‌ ಎಲೆನಾ ರಿಬಾಕಿನಾ ಎದುರು ಪರಾಭವಗೊಂಡರು. 22ನೇ ಶ್ರೇಯಾಂಕದ ರಿಬಾಕಿನಾ ಅವರು ಮುಂದಿನ ಪಂದ್ಯದಲ್ಲಿ ಲಾಟ್ವಿಯಾದ ಎಲೆನಾ ಒಸ್ತಪೆಂಕೊ ಅವರನ್ನು ಎದುರಿಸಲಿದ್ದಾರೆ.

ದಿನದ ಮತ್ತೊಂದು ಮಹಿಳಾ ಸಿಂಗಲ್ಸ್​ ವಿಭಾಗದ ಪಂದ್ಯದಲ್ಲಿ 17ನೇ ಶ್ರೇಯಾಂಕದ ಒಸ್ತಪೆಂಕೊ ಅವರು 7-5, 6-3 ಅಂತರದಿಂದ ಏಳನೇ ಶ್ರೇಯಾಂಕದ ಗಾಫ್ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

ಸ್ಟೆಫ‌ನೋಸ್‌ ಸಿಸಿಪಸ್​ಗೆ ಗೆಲುವು

ಸ್ಟೆಫ‌ನೋಸ್‌ ಸಿಸಿಪಸ್‌ ಅವರು ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಾಲ್ಕು ತಾಸು ಕಠಿಣ ಹೋರಾಟ ನಡೆಸಿ ಇಟಲಿಯ ಜಾನಿಕ್ ಸಿನ್ನರ್ 6-4, 6-4, 3-6, 4-6, 6-3 ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಿರಿ ಲೆಹೆಕಾ 4-6, 6-3, 7-6 (7/2), 7-6 (7/3)ರಿಂದ ಕೆನಡಾದ ಫೆಲಿಕ್ಸ್‌ ಉಜೆರ್‌ ಅಲಿಯಾಸಿಮ್ ಅವರನ್ನು ಹಿಮ್ಮೆಟ್ಟಿಸಿದರು.

ಇದನ್ನೂ ಓದಿ | Australian Open | ಆಸ್ಟ್ರೇಲಿಯಾ ಓಪನ್​; 4ನೇ ಸುತ್ತು ಪ್ರವೇಶಿಸಿದ ಸ್ವಿಯಾಟೆಕ್‌, ಕೊಕೊ ಗಾಫ್

Exit mobile version