ದುಬೈ : ಏಷ್ಯಾ ಕಪ್ ೨೦೨೨ (Asia Cup- 2022) ಆರಂಭಕ್ಕೆ ಇನ್ನೊಂದು ದಿನ ಬಾಕಿ. ಏತನ್ಮಧ್ಯೆ ಯಾವ ತಂಡ ಪ್ರಶಸ್ತಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಶುರವಾಗಿದೆ. ಎಲ್ಲ ರೀತಿಯಲ್ಲೂ ನೋಡಿದರೆ ಭಾರತ ತಂಡವೇ ಹೆಚ್ಚು ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಪರಿಪಕ್ವ ಆಯ್ಕೆ ಎನಿಸಿದೆ. ಅದರಲ್ಲೂ ಬೌಲರ್‌ಗಳು ಉಳಿದ ಐದು ತಂಡಗಳ ಆಟಗಾರರಿಗಿಂತ ಹೆಚ್ಚು ಸಮರ್ಥರಾಗಿ ಕಾಣುತ್ತಿದ್ದಾರೆ. ಹಾಗಾದರೆ ಭಾರತ ಬೌಲಿಂಗ್ ಬಲವೇನು, ಜತೆಗೆ ಉಳಿದ ತಂಡಗಳ ಬೌಲಿಂಗ್ ವಿಭಾಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ನೋಡೋಣ.
ಭಾರತದ ಬಲ : ಭುವನೇಶ್ವರ್ ಕುಮಾರ್ ಭಾರತ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಬಲ. ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಆಲ್‌ರೌಂಡರ್ ಆಗಿ ಪರಿಣಾಮಕಾರಿ ಬೌಲಿಂಗ್ ಮಾಡಬಲ್ಲರು. ಯುವ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ಅಗತ್ಯ ಸಂದರ್ಭದಲ್ಲಿ ಮಿಂಚಬಲ್ಲರು. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯಜ್ವೇಂದ್ರ ಚಹಲ್ ಹಾಗೂ ರವಿ ಬಿಷ್ಣೋಯಿ ಸ್ಪಿನ್ ವಿಭಾಗದ ಅಸ್ತ್ರಗಳಾಗಿವೆ. ಜಡೇಜಾ ಹಾಗೂ ಯಜ್ವೇಂದ್ರ ಚಹಲ್ ಸ್ಪಿನ್ ವಿಭಾಗದ ಪ್ರಮುಖ ಆಯ್ಕೆಗಳಾಗಿವೆ.
ಬಾಂಗ್ಲಾದೇಶ: ಬಾಂಗ್ಲಾದೇಶದ ಬೌಲಿಂಗ್ ವಿಭಾಗದ ಪ್ರಮುಖ ಹೆಸರು ಮುಸ್ತಾಫಿಜುರ್ ರಹ್ಮಾನ್. ಅವರ ಜತೆ ಟಸ್ಕಿನ್ ಅಹಮದ್ ಹಾಗೂ ಮೊಹಮ್ಮದ್ ಸೈಫುದ್ದೀನ್ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಮೆಹೆದಿ ಹಸನ್, ಶಕಿಬ್ ಅಲ್ ಹಸನ್ ಹಾಗೂ ಮೊಸದೆಕ್ ಹೊಸೈನ್ ಇದ್ದಾರೆ.
ಅಫಘಾನಿಸ್ತಾನ : ಮುಜೀಬ್ ಉರ್ ರಹ್ಮಾನ್, ನವೀನ್ ಉಲ್ ಹಕ್, ರಶೀದ್ ಖಾನ್, ಶಮೀವುಲ್ಲಾ ಶಿನ್ವಾರಿ ಹಾಗೂ ಮೊಹಮ್ಮದ್ ನಬಿ ಬೌಲಿಂಗ್ ವಿಭಾಗದಲ್ಲಿದ್ದಾರೆ. ಅಫಘಾನಿಸ್ತಾನ ತಂಡದ ಸ್ಪಿನ್ ವಿಭಾಗವೇ ಹೆಚ್ಚು ಬಲಿಷ್ಠವಾಗಿದೆ.
ಶ್ರೀಲಂಕಾ : ಶ್ರೀಲಂಕಾ ತಂಡದಲ್ಲಿ ಸಾಕಷ್ಟು ಸ್ಪಿನ್ ಬೌಲರ್‌ಗಳಿದ್ದಾರೆ. ಅದರೆ, ಪಂದ್ಯ ನಡೆಯುವ ಎರಡೂ ಸ್ಟೇಡಿಯಮ್‌ಗಳು ನಿಧಾನಗತಿಯ ಬೌಲರ್‌ಗಳಿಗೆ ನೆರವಾಗುವುದಿಲ್ಲ. ನುವಾನ್ ತುಸಾರಾ, ಚಾಮಿಕಾ ಕರುಣಾರತ್ನೆ ಲಂಕಾ ತಂಡದ ವೇಗಿಗಳಾಗಿದ್ದಾರೆ. ದುಷ್ಮಂತಾ ಚಾಮೀರಾ ಅಲಭ್ಯರಾಗಿವುದು ತಂಡಕ್ಕೆ ಹೊಡ್ಡ ಹಿನ್ನಡೆ. ವಾನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ ಸ್ಪಿನ್ ವಿಭಾಗದಲ್ಲಿ ಲಂಕಾ ತಂಡ ಸೇರಿಕೊಂಡಿದ್ದಾರೆ.
ಹಾಂಕಾಂಗ್ : ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದ ತಂಡ ಹಾಂಕಾಂಗ್. ಈ ತಂಡದಲ್ಲಿ ಇಶಾನ್ ಖಾನ್ ಪ್ರಮುಖ ಬೌಲರ್. ಅಫ್ತಾಬ್ ಹುಸೈನ್, ಧನಂಜಯ ರಾವ್, ಮೊಹಮ್ಮದ್ ವಾಹಿದ್, ತ್ರಿವೇದಿ ಹಾಗೂ ಅತೀಕ್ ಇಕ್ಬಾಲ್ ಹಾಂಕಾಂಗ್ ತಂಡದ ಪರ ಉತ್ತಮ ಪ್ರದರ್ಶನ ನೀಡಬಲ್ಲ ಬೌಲರ್‌ಗಳಾಗಿದ್ದಾರೆ.
ಇದನ್ನೂ ಓದಿ | Asia Cup- 2022 | ಏಷ್ಯಾ ಕಪ್‌ಗೆ ಹೋಗುವ ಭಾರತ ತಂಡದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ