ಸಿಡ್ನಿ: ಟಿ20 ವಿಶ್ವ ಕಪ್ನ ಸೂಪರ್-12 ಸುತ್ತಿನಲ್ಲಿ ರೋಚಕ ಮತ್ತು ಅಚ್ಚರಿಯ ಫಲಿತಾಂಶ ಕಂಡು ಬರುತ್ತಿದೆ. ಇನ್ನೊಂದೆಡೆ ಮಳೆಯಿಂದ ಕೆಲ ಪಂದ್ಯ ರದ್ದುಗೊಂಡು ಅಂಕಗಳು ಹಂಚಿ ಹೋಗುತ್ತಿವೆ. ಇದರ ನಡುವೆ ಟೀಮ್ ಇಂಡಿಯಾ(IND) 2ನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆದರೆ ಅಭ್ಯಾಸ ನಡೆಸಲು ಟೀಮ್ ಇಂಡಿಯಾಗೆ ನಾನಾ ಸಮಸ್ಯೆಗಳು ಎದುರಾಗಿವೆ.
ಅಕ್ಟೋಬರ್ 27 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಟಿ20 ವಿಶ್ವ ಕಪ್ ಆತಿಥ್ಯ ವಹಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ರೋಹಿತ್ ಪಡೆ ಬುಧವಾರದ ನೆಟ್ ಪ್ರಾಕ್ಟೀಸ್ ಮೊಟಕುಗೊಳಿಸಿದೆ.
ಸಾಮಾನ್ಯವಾಗಿ ಮೈದಾನದ ಸುತ್ತ- ಮುತ್ತಲಿನ ಹೋಟೆಲ್ಗಳಲ್ಲಿ ಆಟಗಾರರಿಗೆ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಭಾರತ ತಂಡಕ್ಕೆ 42 ಕಿ.ಮೀ ದೂರ ಪ್ರಯಾಣ ಮಾಡಿ ಆ ಬಳಿಕ ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಆಟಗಾರರನ್ನು ಹೆಚ್ಚು ಆಯಾಸಕ್ಕೆ ದೂಡುತ್ತದೆ. ಹೀಗಾಗಿ ಅಭ್ಯಾಸವನ್ನೇ ಟೀಮ್ ಇಂಡಿಯಾ ರದ್ದುಗೊಳಿಸಿದೆ. ಏಕೆಂದರೆ ಅಕ್ಟೋಬರ್ 27ರಂದು ರೋಹಿತ್ ಪಡೆ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಬೇಕಿದ್ದು, ಅದಕ್ಕೂ ಮುನ್ನ 84 ಕಿ.ಮೀ ಪ್ರಯಾಣದ ಜತೆ ಅಭ್ಯಾಸ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದು ಮರುದಿನ ಕಣಕ್ಕಿಳಿಯುವ ಆಟಗಾರರ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಆಟಗಾರರ ತಾಲೀಮನ್ನೇ ರದ್ದುಗೊಳಿಸಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇದು ಉದ್ದೇಶ ಪೂರ್ವಕ ಷಡ್ಯಾಂತರವೇ?
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಗೆದ್ದು ಎಲ್ಲಡೆ ಸುದ್ದಿಯಲ್ಲಿರುವ ಟೀಮ್ ಇಂಡಿಯಾ, ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ. ಇದೀಗ ನೆದರ್ಲೆಂಡ್ಸ್ ವಿರುದ್ಧವೂ ಗೆದ್ದರೆ ಭಾರತದ ಸೆಮಿ ಹಾದಿ ಮತ್ತಷ್ಟು ಸುಗಮಗೊಳ್ಳಲಿದೆ ಈ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ರೀತಿಯ ಷಡ್ಯಂತ್ರ ನಡೆಸೀತೇ ಎನ್ನುವ ಅನುಮಾನ ಒಂದು ಕಡೆ ಕಾಡಲಾರಂಭಿಸಿದೆ. ಏಕೆಂದರೆ ಆಸ್ಟ್ರೇಲಿಯಾ ಈಗಾಗಲೇ ಒಂದು ಪಂದ್ಯ ಸೋತಿದೆ. ಇನ್ನೊಂದೆಡೆ ಮಳೆಯೂ ಕಾಡಲಾರಂಭಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಅಂಕದ ಕಡಿತದ ಭೀತಿಯೂ ಎದುರಾಗಿದೆ. ಈ ಎಲ್ಲ ಲೆಕ್ಕಾಚಾರದಲ್ಲಿ ಉದ್ದೇಶಪೂರ್ವಕವಾಗಿಯೇ ಭಾರತ ಕ್ರಿಕೆಟ್ ತಂಡಕ್ಕೆ ಈ ರೀತಿಯ ಅನ್ಯಾಯ ಮಾಡಿದರೇ ಎಂದು ಅನುಮಾನ ಮೂಡಿದೆ. ಜತೆಗೆ ಆಟಗಾರರಿಗೆ ನೀಡುವ ಆಹಾರದಲ್ಲಿಯೂ ತಾರತಮ್ಯ ಮೆರೆದಿದೆ.
ಇದನ್ನೂ ಓದಿ | T20 World Cup | ನ್ಯೂಜಿಲೆಂಡ್- ಅಫಘಾನಿಸ್ತಾನ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಕ್ಕೂ ಅಂಕ ಹಂಚಿಕೆ