ಸಿಡ್ನಿ: ಟಿ20 ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಮಣಿಸಿ ಭರ್ಜರಿ ಶುಭಾರಂಭ ಮಾಡಿದೆ. ಮುಂದಿನ ಪಂದ್ಯಕ್ಕಾಗಿ ಸಿಡ್ನಿಯಲ್ಲಿ ಅಭ್ಯಾಸವನ್ನು ನಡೆಸುತ್ತಿದೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಆಟಗಾರಿಗೆ ನೀಡುವ ಆಹಾರದ ಬಗ್ಗೆ ಆರೋಪವೊಂದು ಕೇಳಿ ಬಂದಿದೆ. ಟೀಮ್ ಇಂಡಿಯಾ ಮಂಗಳವಾರ ಅಭ್ಯಾಸ ನಡೆಸಿದ ವೇಳೆ ಆಟಗಾರರಿಗೆ ನೀಡಿದ ಊಟೋಪಚಾರ ಬೇಸರ ನೀಡಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸಿಡ್ನಿಯಲ್ಲಿ ಅಭ್ಯಾಸದ ಬಳಿಕ ಟೀಮ್ ಇಂಡಿಯಾಗೆ ಉತ್ತಮ ಗುಣಮಟ್ಟದ ಆಹಾರ ನೀಡಿಲ್ಲ. ಹಾಗೆಯೇ ನೀಡಿದ ಆಹಾರವೂ ತಣ್ಣಗಾಗಿತ್ತು ಎಂದು ಬಿಸಿಸಿಐ, ಐಸಿಸಿಗೆ ದೂರು ಸಲ್ಲಿಸಿದೆ. ಅಲ್ಲದೆ ಅಭ್ಯಾಸದ ನಂತರ ನೀಡಿದ ಆಹಾರದ ಬಗ್ಗೆ ಭಾರತೀಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಭ್ಯಾಸ ಮುಗಿಸಿ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಕ್ರೀಡಾಂಗಣದ ಸಿಬ್ಬಂದಿ ಸ್ಯಾಂಡ್‌ವಿಚ್ ಅನ್ನು ಆಹಾರವಾಗಿ ನೀಡಿದ್ದಾರೆ. ಆದರೆ ಅದು ಕೂಡ ತೀರ ತಣ್ಣಾಗಾಗಿತ್ತು. ಹೀಗಾಗಿ ರೋಹಿತ್ ಪಡೆ ಈ ಆಹಾರವನ್ನು ತಿರಸ್ಕರಿಸಿ ಹಣ್ಣುಗಳನ್ನು ತಿಂದು ಅಲ್ಲಿಂದ ಹೊಟೇಲ್ಗೆ ತೆರಳಿದ್ದಾರೆ. ಆ ಬಳಿಕ ಆಟಗಾರರು ತಮ್ಮ ಅಸಮಾಧಾನವನ್ನು ಬಿಸಿಸಿಐ ಎದುರು ತೊಡಿಕೊಂಡಿದ್ದು, ಬಳಿಕ ಬಿಸಿಸಿಐ ಈ ಬಗ್ಗೆ ಐಸಿಸಿಗೆ ದೂರು ನೀಡಿದೆ.
ಆಹಾರದ ಹೊರತಾಗಿ ತಂಡದ ಅಭ್ಯಾಸದ ಸ್ಥಳದ ಬಗ್ಗೆಯೂ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಭಾರತ ತಂಡ ಅಭ್ಯಾಸ ನಡೆಸುವ ಸ್ಥಳಕ್ಕೂ ಮತ್ತು ಆಟಗಾರರು ತಂಗಿರುವ ಹೊಟೇಲ್‌ಗೂ ಸುಮಾರು 40 ಕೀ.ಮೀ. ದೂರವಿದೆ. ಅಷ್ಟು ದೂರ ಪ್ರಯಾಣ ಮಾಡಿ ಆ ಬಳಿಕ ಅಭ್ಯಾಸ ಮಾಡಬೇಕೆಂದರೆ ಅದು ಆಟಗಾರರಿಗೆ ಹೆಚ್ಚು ಆಯಾಸವನ್ನುಂಟು ಮಾಡುತ್ತದೆ. ಹೀಗಾಗಿ ಇದು ಕೂಡ ರೋಹಿತ್ ಪಡೆಯ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ | T20 World Cup | ಟೀಮ್ ಇಂಡಿಯಾದಲ್ಲಿ ಪಾಕಿಸ್ತಾನ ತಂಡದ ಬೌಲರ್; ಕೊಹ್ಲಿ, ರೋಹಿತ್ ಮೆಚ್ಚುಗೆ