ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಅಂತಿಮ ಪಂದ್ಯವನ್ನಾಡಲು(IND vs AFG 3rd T20) ಸಜ್ಜಾಗಿದೆ. ಇತ್ತಂಡಗಳ ನಡುವಣ ಈ ಪಂದ್ಯ ನಾಳೆ(ಬುಧವಾರ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M.Chinnaswamy Stadium, Bengaluru) ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಕನಿಷ್ಠ ಮೂರು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ಸಿಗದ ಸಂಜು ಸ್ಯಾಮ್ಸನ್, ಅವೇಶ್ ಖಾನ್ ಮತ್ತು ಕುಲ್ದೀಪ್ ಅವರಿಗೆ ಮೂರನೇ ಪಂದ್ಯದಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಇವರಿಗಾಗಿ ಜಿತೇಶ್ ಶರ್ಮ, ಮುಕೇಶ್ ಕುಮಾರ್ ಮತ್ತು ರವಿ ಬಿಷ್ಣೋಯ್ ಜಾಗ ಬಿಡಬೇಕಾಗಿದೆ.
ಅನುಭವಿ ಕೀಪರ್ ಮತ್ತು ಟಿ20ಯಲ್ಲಿ ಹಾರ್ಡ್ ಹಿಟ್ಟರ್ ಆಗಿರುವ ಕೇರಳದ ಸಂಜು ಸ್ಯಾಮ್ಸನ್ ತಂಡದಲ್ಲಿದ್ದರೂ ಅವರಿಗೆ ಆಡುವ ಅವಕಾಶ ನೀಡದ ಬಗ್ಗೆ ಹಲವರು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಜು ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಪಂದ್ಯದಲ್ಲಿ ಶತಕ ಕೂಡ ಬಾರಿಸಿದ್ದರು. ಆದರೂ ಕೂಡ ಅವರಿಗೆ ಆಫ್ಘನ್ ಟಿ20 ಸರಣಿಯಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇದೀಗ ಅಂತಿಮ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ ಶ್ರೀರಾಮನ ಚಿತ್ರ ಬರೆದು ರಾಮಮಂದಿರ ಉದ್ಘಾಟನೆಗೆ ಶುಭ ಕೋರಿದರೇ ಕ್ರಿಕೆಟಿಗ ಕುಲದೀಪ್ ಯಾದವ್?
Indore ✈️ Bengaluru#TeamIndia in town for the 3⃣rd & final T20I 👏 👏#INDvAFG | @IDFCFIRSTBank pic.twitter.com/xKKRi6yf9W
— BCCI (@BCCI) January 15, 2024
ಟಿ20 ವಿಶ್ವಕಪ್ಗೆ ತಂಡ ಸಂಯೋಜನೆ ಮಾಡುತ್ತಿರುವ ಕಾರಣ ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಇದೇ ಕಾರಣಕ್ಕೆ ಅನುಭವಿ ಕುಲ್ದೀಪ್ ಅವರನ್ನು ಆಡುವ ಬಳಗದಿಂದ ಹೊರಗಿರಿಸಿ ಅವರ ಸ್ಥಾನದಲ್ಲಿ ರವಿ ಬಿಷ್ಣೋಯ್ಗೆ ಅವಕಾಶ ನೀಡಲಾಗಿತ್ತು. ಜತೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20ಯಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದ ಕಾರಣ ಅವರಿಗೆ ಈ ಸರಣಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು. ಆದರೆ, ಅವರು ಆಡಿದ 2 ಪಂದ್ಯಗಳಲ್ಲಿಯೂ ದುಬಾರಿ ರನ್ ನೀಡಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಅಂತಿಮ ಪಂದ್ಯದಿಂದ ಕೈ ಬಿಟ್ಟು ಅವರ ಬದಲು ಕುಲ್ದೀಪ್ ಕಣಕ್ಕಿಳಿಯಬಹುದು.
ಸರಣಿ ಗೆದ್ದಿರುವ ಕಾರಣ ಮುಕೇಶ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಿ ಅವೇಶ್ ಖಾನ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಕಷ್ಟ. ದ್ವಿತೀಯ ಪಂದ್ಯದಲ್ಲಿ ಆಡದ ಗಿಲ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕ್ಷೀಣವಾಗಿದೆ. ಏಕೆಂದರೆ ಅವರ ಸ್ಥಾನದಲ್ಲಿ ಆಡಿದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಯಶಸ್ವಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಮಾತೇ ಇಲ್ಲ.
ಭಾರತ ಆಡುವ ಸಂಭಾವ್ಯ ಬಳಗ
ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ವಾಷಿಂಗ್ಟನ್ ಸುಂದರ್.