ಮೊಹಾಲಿ: ಟೀಮ್ ಇಂಡಿಯಾದ(Team India) ಯುವ ಬ್ಯಾಟರ್ ರಿಂಕು ಸಿಂಗ್(Rinku Singh) ಬಗ್ಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೆಎಚ್ಚುಗೆ ಮಾತುಗಳನ್ನಾಡಿದ್ದಾರೆ. ಜತೆಗೆ ಇದೇ ವರ್ಷ ನಡೆಯುವ ಟಿ20 ವಿಶ್ವಕಪ್ ಆಯ್ಕೆಯ ಬಗ್ಗೆಯೂ ಮಹತ್ವದ ಹೇಳಿಕೆ ನೀಡಿದ್ದಾರೆ.
ಅಫಘಾನಿಸ್ತಾನ ವಿರುದ್ಧ ಇಂದು ಮೊಹಾಲಿಯಲ್ಲಿ ನಡೆಯುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿಂಕು ಉತ್ತಮ ಶುಭಾರಂಭ ಮಾಡಿದ್ದಾರೆ. ಅವರು ತಂಡದ ಪರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮಿಸ್ಟರ್ ಫಿನಿಶರ್ ಖ್ಯಾತಿಯಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಜತೆಗೆ ಅವರಿಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟಿ20 ವಿಶ್ವಕಪ್‌ನಲ್ಲಿ ರಿಂಕು ಸ್ಥಾನದ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊಳ್ಳುವು ಕಷ್ಟ. ಇದು ರಿಂಕು ವಿಚಾರದಲ್ಲಿ ಮಾತ್ರವಲ್ಲ ಎಲ್ಲ ಆಟಗಾರರಿಗೂ ಅನ್ವಯವಾಗುತ್ತದೆ. ಸದ್ಯ ರಿಂಕು ತಂಡದಲ್ಲಿ ಉತ್ತಮ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಅಫಘಾನಿಸ್ತಾನ ಸರಣಿಯಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದರೆ ಆಯ್ಕೆ ಸಮಿತಿ ಅವರ ಮೇಲೆ ವಿಶೇಷ ನಿಗಾ ಇರಿಸಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.
🗣️ 🗣️ It will be a good challenge against the Afghanistan spinners and we are looking forward to it#TeamIndia Head Coach Rahul Dravid ahead of the #INDvAFG T20I series starting tomorrow @IDFCFIRSTBank pic.twitter.com/Tr6P7zOMSL
— BCCI (@BCCI) January 10, 2024
ಐಪಿಎಲ್ನಿಂದ ಖುಲಾಯಿಸಿ ಅದೃಷ್ಟ
ಕಳೆದ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL) ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್(Rinku Singh), ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯವೊಂದರಲ್ಲಿ ಯಶ್ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು. ಅವರ ಈ ಪ್ರದರ್ಶನ ಕಂಡ ಬಿಸಿಸಿಐ, ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಕಲ್ಪಿಸಿತು. ಸದ್ಯ ರಿಂಕು ಭಾರತ ಟಿ20 ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ Rinku Singh: ಏಕದಿನ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ ಸಿಕ್ಸರ್ ಸಿಂಗ್ ಖ್ಯಾತಿಯ ರಿಂಕು
ಕಷ್ಟಗಳನ್ನು ದಾಟಿ ಬಂದ ಪ್ರತಿಭೆ
ರಿಂಕು ಅವರು ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲು ತುಂಬಾ ಕಷ್ಟಗಳನ್ನು ದಾಟಿ ಬಂದ ಪ್ರತಿಭೆ. ಕಡು ಬಡತನದಲ್ಲಿ ಬೆಳೆದ ಅವರು ಕೂಲಿ ಕೆಲಸವನ್ನು ಮಾಡುವ ಜತೆಗೆ ಕ್ರಿಕೆಟ್ ಅಭ್ಯಾಸ ನಡೆಸಿ ಇಂದು ಒಂದು ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂಡರ್-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್ ಬಾಗಿಲು ತೆರೆಯಿತು.
2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್ ಆಗಿದ್ದಾರೆ. ಇದೀಗ ಟೀಮ್ ಇಂಡಿಯಾದಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ತಂಡದ ಫಿನಿಶರ್ ರೋಲ್ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಅವರು ಆಡುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ.