Site icon Vistara News

IND vs AGF: ಆಫ್ಘನ್​ ಸರಣಿಗೆ ಇಂದು ಭಾರತ ತಂಡ ಪ್ರಕಟ; ರೋಹಿತ್, ಕೊಹ್ಲಿ ಭವಿಷ್ಯ ಕೂಡಾ ನಿರ್ಧಾರ

team india cricket

ಮುಂಬಯಿ: ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಅಫಘಾನಿಸ್ತಾನ(IND vs AGF) ವಿರುದ್ಧದ ತವರಿನ ಮೂರು ಪಂದ್ಯಗಳ ಟಿ20 ಸರಣಿಗೆ ಇಂದು(ಭಾನುವಾರ ಜ.7) ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಅಫಘಾನಿಸ್ತಾನ ಕ್ರಿಕೆಟ್​ ಮಂಡಳಿ ತಂಡವನ್ನು ಪ್ರಕಟಿಸಿದೆ.

ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್​ ಗಾಯಗೊಂಡು ವಿಶ್ರಾಂತಿಯಲ್ಲಿರುವ ಕಾರಣ ತಂಡದ ನಾಯಕತ್ವವನ್ನು ಯಾರಿಗೆ ನೀಡುವುದು ಎಂಬ ಗೊಂದಲ ಜತೆಗೆ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿಯ ಟಿ20 ಕ್ರಿಕೆಟ್​ ನಿರ್ಧಾರ ಈ ಎಲ್ಲ ಕಾರಣಗಳಿಂದ ತಂಡ ಪ್ರಕಟಿಸಲು ಬಿಸಿಸಿಐ ತಡವರಿಸಿದೆ. ಆದರೆ, ಇಂದು ಬಹುತೇಕವಾಗಿ ಅಂತಿಮ ಚಿತ್ರಣ ಸಿಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಇಂದು ಸಭೆ ಸೇರುವ ಸಾಧ‍್ಯತೆಯಿದ್ದು, ಸಂಜೆ ವೇಳೆಗೆ ತಂಡ ಪ್ರಕಟವಾಗುವ ಸಾಧ‍್ಯತೆಯಿದೆ. ಈ ಮೂಲಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಭವಿಷ್ಯ ಕೂಡಾ ನಿರ್ಧಾರವಾಗಲಿದೆ. ಇದೇ ವಿಚಾರವಾಗಿ ಉಭಯ ಆಟಗಾರರ ಜತೆ ಚರ್ಚಿಸಲು ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾಗೂ ತೆರಳಿತ್ತು.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರನ್ನು ಅಫಘಾನಿಸ್ತಾನ ಸರಣಿಯನ್ನು ಕಡೆಗಣಿಸಿದರೆ ಕನ್ನಡಿಗ ಕೆ.ಎಲ್ ರಾಹುಲ್​ಗೆ ನಾಯಕತ್ವ ಸಿಗುವ ಸಾಧ‍್ಯತೆಯಿದೆ. ರಾಹುಲ್​ ಈ ಹಿಂದೆ ಹಲವು ಸರಣಿಗಳಲ್ಲಿ ತಂಡದ ನಾಯಕತ್ವ ವಹಿಸಿ ಇದರಲ್ಲಿ ಯಶಸ್ಸು ಗಳಿಸಿದ್ದಾರೆ. ಜತೆಗೆ ಸತತ 10 ಸರಣಿಗಳನ್ನು ಗೆದ್ದ ದಾಖಲೆಯೂ ಇವರ ಹೆಸರಿನಲ್ಲಿದೆ.

ಇದೇ ವರ್ಷ ಟಿ20 ವಿಶ್ವಕಪ್ ನಡೆಯಲ್ಲಿದ್ದು ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಸಮರ್ಥ ತಂಡವನ್ನು ಪ್ರಕಟಿಸಬೇಕಿದೆ. ರೋಹಿತ್​ ಮತ್ತು ಕೊಹ್ಲಿ ಈ ಸರಣಿಯಲ್ಲಿ ಆಡಿದರೆ ಉಭಯ ಆಟಗಾರರು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

ಜ. 11ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, 14ರಂದು ಇಂದೋರ್ ಮತ್ತು 17ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ತಂಡ ಸೇರಿದ ರಶೀದ್​ ಖಾನ್​

ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಅಫಘಾನಿಸ್ತಾನ ತಂಡ(Afghanistan Cricket) ಪ್ರಕಟಗೊಂಡಿದೆ. ತಂಡವನ್ನು ಇಬ್ರಾಹಿಂ ಝದ್ರಾನ್ ಮುನ್ನಡೆಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ IND vs ENG: ಭಾರತ ಪ್ರವಾಸಕ್ಕೆ ಇಂಗ್ಲೆಂಡ್​ ತಂಡದೊಂದಿಗೆ ಬರಲಿದ್ದಾರೆ ಪ್ರಸಿದ್ಧ ಬಾಣಸಿಗ

ಅಫಘಾನಿಸ್ತಾನ ತಂಡ

ಇಬ್ರಾಹಿಂ ಝದ್ರಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಕ್ರಂ ಅಲಿಖಿಲ್ (ವಿಕೆಟ್‌ ಕೀಪರ್), ಹಜರತ್‌ವುಲ್ಲಾ ಝಝೈ, ರೆಹಮತ್ ಶಾ, ನಜೀಬುಲ್ಲಾ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜಮುಲ್ಲಾ ಒಮರ್‌ಝೈ, ಶರಾಫುದ್ದೀನ್ ಅಶ್ರಫ್‌, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಖಿ, ಫರೀದ್ ಅಹಮದ್, ನವೀನ್ ಉಲ್ ಹಕ್, ನೂರ್‌ ಅಹಮದ್, ಮೊಹಮ್ಮದ್ ಸಲೀಂ, ಖೈಸ್ ಅಹಮದ್, ಗುಲ್ಬದೀನ್‌ ನೈಬ್‌.

Exit mobile version