ಬಾರ್ಬಡೋಸ್: ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ವಿಶ್ವ ದಾಖಲೆಯೊಂದರ ಹೊಸ್ತಿಲಲ್ಲಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ, ನಾಳೆ(ಗುರುವಾರ) ನಡೆಯುವ ಅಫಘಾನಿಸ್ತಾನ(IND vs AGF) ವಿರುದ್ಧದ ಸೂಪರ್-8 ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವ ಆತ್ಮವಿಶ್ವಾಸದಲ್ಲಿದ್ದಾರೆ. ಜತೆಗೆ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ತವಕದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅವರು ಅಫಘಾನಿಸ್ತಾನ ಎದುರಿನ ಪಂದ್ಯದಲ್ಲಿ 8 ಬೌಂಡರಿ ಬಾರಿಸಿದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ(most fours in T20 World Cup) ಬಾರಿಸಿದ ಮೊದಲ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ(Mahela Jayawardene) ಹೆಸರಿನಲ್ಲಿದೆ. ಜಯವರ್ಧನೆ 111 ಬೌಂಡರಿ ಬಾರಿಸಿದ್ದರೆ, ಕೊಹ್ಲಿ ಸದ್ಯ 104* ಬೌಂಡರಿ ಬಾರಿಸಿದ್ದಾರೆ.
ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 700ಕ್ಕೂ ಅಧಿಕ ರನ್ ಗಳಿಸಿ ಟೂರ್ನಿಯಲ್ಲೇ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ, ಈ ಯಶಸ್ಸು ಕೊಹ್ಲಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೈ ಹಿಡಿಯಲಿಲ್ಲ. 1, 4,0 ಇದು ಕೊಹ್ಲಿಯ ಈ ಬಾರಿಯ ಸ್ಕೋರ್ ಆಗಿದೆ. ಇದೀಗ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಾದರೂ ಅವರು ಉತ್ತಮ ಬ್ಯಾಟಿಂಗ್ ನಡೆಸಿ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರಾ? ಎಂದು ಕಾದು ನೋಡಬೇಕಿದೆ.
ಟ20 ವಿಶ್ವಕಪ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಬ್ಯಾಟರ್ಗಳು
ಆಟಗಾರ | ದೇಶ | ಇನಿಂಗ್ಸ್ | ಬೌಂಡರಿ |
ಮಹೇಲಾ ಜಯವರ್ಧನೆ | ಶ್ರೀಲಂಕಾ | 31 | 111 |
ವಿರಾಟ್ ಕೊಹ್ಲಿ | ಭಾರತ | 30 | 104* |
ತಿಲಕರತ್ನೆ ದಿಲ್ಶನ್ | ಶ್ರೀಲಂಕಾ | 35 | 101 |
ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 38 | 97* |
ರೋಹಿತ್ ಶರ್ಮ | ಭಾರತ | 42 | 96* |
ಕ್ರಿಸ್ ಗೇಲ್ | ವೆಸ್ಟ್ ಇಂಡೀಸ್ | 31 | 78 |
ಜಾಸ್ ಬಟ್ಲರ್ | ಇಂಗ್ಲೆಂಡ್ | 31 | 78* |
ಕೇನ್ ವಿಲಿಯಮ್ಸನ್ | ನ್ಯೂಜಿಲ್ಯಾಂಡ್ | 29 | 71* |
ಬ್ರೆಂಡನ್ ಮೆಕಲಮ್ | ನ್ಯೂಜಿಲ್ಯಾಂಡ್ | 25 | 67 |
ಕುಮಾರ್ ಸಂಗಕ್ಕಾರ | ಶ್ರೀಲಂಕಾ | 31 | 63 |
ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದು ಕೂಡ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣವಿರಬಹುದು. ಕೆಲ ವರ್ಷಗಳಿಂದ ಐಪಿಎಲ್ನಲ್ಲಿ ಕೊಹ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಯಲ್ಲಿ ಇದುವರೆಗೂ ಆಡಿರಲಿಲ್ಲ. ಶೈನಿಂಗ್ ಬಾಲ್ನಲ್ಲಿ ಅವರಿಗೆ ಆಡಿದ ಅನುಭವ ಕೂಡ ಅಷ್ಟಾಗಿ ಇಲ್ಲ. ಏನಿದ್ದರೂ ಮಧ್ಯಮ ಕ್ರಮಾಂಕದಲ್ಲಿಯೇ ಅವರು ಹೆಚ್ಚು ಸಕ್ಸನ್ ಕಂಡಿರುವುದು. ಹೀಗಾಗಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರನ್ನು ಎಂದಿನಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಿಸುವುದು ಸೂಕ್ತ ಎನ್ನಲಾಗಿದೆ.
ಇದನ್ನೂ ಓದಿ Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್ ದಂತಕಥೆ ಸರ್ ವೆಸ್ಲಿ ಹಾಲ್
ಟೀಮ್ ಇಂಡಿಯಾದ ಆಟಗಾರರು ಹಾಲಿ ಟಿ20 ವಿಶ್ವಕಪ್ ಟೂರ್ನಿಯ(T20 World Cup 2024) ಸೂಪರ್-8 ಪಂದ್ಯವನ್ನಾಡಲು ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿದ್ದಾರೆ(Barbados). ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವೇಳೆ ತಂಡದ ಸದಸ್ಯರು ವಿಂಡೀಸ್ ದಂತಕಥೆ ಸರ್ ವೆಸ್ಲಿ ಹಾಲ್(Sir Wesley Hall) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ವೆಸ್ಲಿ ಹಾಲ್ ಅವರು ವಿರಾಟ್ ಕೊಹ್ಲಿ(Virat Kohli) ಜತೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿ 80 ಶತಕ ಬಾರಿಸಿರುವ ನೀವು 100 ಶತಕವನ್ನು ಪೂರ್ತಿಗೊಳಿಸಬೇಕು ಎಂದು ಹಾರೈಸಿದ್ದಾರೆ. ಜತೆಗೆ ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ಹಸ್ತಾಕ್ಷರದೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ.