ಧರ್ಮಶಾಲ: ಕಳೆದ 20 ವರ್ಷಗಳಿಂದ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಆಡಿದ ಎಲ್ಲ ಐಸಿಸಿಯ(ICC) ಮಹತ್ವದ ಟೂರ್ನಿಯಲ್ಲಿ ಸೋಲು ಕಂಡಿರುವ ಭಾರತ ತನ್ನ ಸೋಲಿನ ಸರಪಳಿಯನ್ನು ಕಡಿದುಕೊಳ್ಳುವ ವಿಶ್ವಾಸದಲ್ಲಿದೆ. ಭಾನುವಾರ ಧರ್ಮಶಾಲದಲ್ಲಿ ಇತ್ತಂಡಗಳ ಈ ಕಾದಾಟ ನಡೆಯಲಿದೆ. ಆದರೆ ಭಾರತ ಈ ಪಂದ್ಯಕ್ಕೆ ತಂಡದಲ್ಲಿ 2 ಬದಲಾವಣೆ ಮಾಡಲಿದೆ.
ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಯತ್ನದಲ್ಲಿ ಪಾದದ ಗಾಯಕ್ಕೆ ಸಿಲುಕಿದ ಹಾರ್ದಿಕ್ ಪಅಮಡ್ಯ ಅವರು ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಗುರುವಾರವೇ ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಅವರ ಸ್ಥಾನದಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.
ಸೂರ್ಯಕುಮಾರ್ಗೆ ಅವಕಾಶ
ಹಾರ್ದಿಕ್ ಪಾಂಡ್ಯ ಅಲಭ್ಯತೆಯಿಂದ ತಂಡಕ್ಕೆ ಒಬ್ಬ ಬ್ಯಾಟರ್ನ ಕೊರತೆಯಾಗುತ್ತದೆ. ಈ ನಿಟ್ಟಿನಲ್ಲಿ ಸೂರ್ಯಕುಮಾರ್ ಯಾದವ್ಗೆ ಈ ಪಂದ್ಯದಲ್ಲಿ ಅವಕಾಶ ನೀಡುವುದು ಖಚಿತ. ಅವರು ಆಲ್ರೌಂಡರ್ ಅಲ್ಲದಿದ್ದರೂ ಬ್ಯಾಟಿಂಗ್ ಬಲಕೋಸ್ಕರ ಅವರಿಗೆ ಸ್ಥಾನ ಖಚಿತ ಎನ್ನಲಾಗಿದೆ. ಇಶಾನ್ ಕಿಶನ್ ಉತ್ತಮ ಫಾರ್ಮ್ನಲ್ಲಿದ್ದರೂ ಅವರಿಗೆ ಅವಕಅಶ ನೀಡುವುದು ಅನುಮಾನ ಏಕೆಂದರೆ ಇಬ್ಬರು ಕೀಪರ್ಗಳನ್ನು ಆಡಿಸಿ ಯಾರಾದರು ಗಾಯಗೊಂಡರೆ ಬ್ಯಾಕ್ ಅಪ್ ಕೀಪರ್ ಇಲ್ಲ. ಅಲ್ಲದೆ ಧರ್ಮಶಾಲ ಮೈದಾನ ಫೀಲ್ಡಿಂಗ್ಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಈಗಾಗಲೇ ಇಲ್ಲಿ ಆಡಿದ ತಂಡದ ಆಟಗಾರರು ಬಹಿರಂಗವಾಗಿಯೇ ಈ ವಿಚಾರವನ್ನು ಹೇಳಿದ್ದಾರೆ. ಹೀಗಾಗಿ ತಂಡ ರಿಸ್ಕ್ ತೆಗೆದುಕೊಳ್ಳುವುದು ಅನುಮಾನ. ಸದ್ಯಕ್ಕೆ ಸೂರ್ಯ ಅವರೇ ಉತ್ತಮ ಆಯ್ಕೆ.
ಶಾರ್ದೂಲ್ ಬದಲು ಶಮಿ
ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲವಾದರೂ ಅವರಿಗೆ ಪದೇಪೆ ಅವಕಾಶ ನೀಡುತ್ತಿರುವ ಬಗ್ಗೆ ಈಗಾಗಲೇ ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಅಪಸ್ವರ ಕೇಳಿಬಂದಿದೆ. ಅವರ ಪತ್ರಿ ಪಂದ್ಯದಲ್ಲೂ ದುಬಾರಿಯಾಗುತ್ತಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಇರದ ಕಾರಣ ಶಾರ್ದೂಲ್ 10 ಓವರ್ ಎಸೆಯಬೇಕಾಗಿದೆ. ಒಂದೊಮ್ಮೆ ಅವರಿಗೆ 10 ಓವರ್ ನೀಡಿದರೆ ವಿಪರೀತ ರನ್ ಸೋರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಅನುಭವಿ ಮೊಹಮ್ಮದ್ ಶಮಿ ಅವರನ್ನು ಈ ಪಂದ್ಯದಲ್ಲಿ ಆಡಿಸುವುದು ಸೂಕ್ತ. ಆಗ ಭಾರತ ತಂಡದ ಬೌಲಿಂಗ್ ವಿಭಾಗವೂ ಅತ್ಯಂತ ಬಲಿಷ್ಠವಾಗಲಿದೆ. ತ್ರಿವಳಿ ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಮಿ ಸೇರಿಕೊಂಡು ಕಿವೀಸ್ ಕಿವಿ ಹಿಂಡಬಹುದು. ಸ್ಪಿನ್ ವಿಭಾಗದಲ್ಲಿ ಜಡೇಜಾ ಮತ್ತು ಕುಲ್ದೀಪ್ ಇದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಭಯ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಅಶ್ವಿನ್ಗೆ ಅವಕಾಶ ಕಷ್ಟ.
ಇದನ್ನೂ ಓದಿ IND vs NZ: ಐಸಿಸಿ ಟೂರ್ನಿಯಲ್ಲಿ 20 ವರ್ಷಗಳಿಂದ ಭಾರತ ವಿರುದ್ಧ ಕಿವೀಸ್ ಅಜೇಯ ದಾಖಲೆ
ಸಂಭಾವ್ಯ ತಂಡ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.